ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿರೋ ಶ್ರೀಲಂಕಾ ಪ್ರತಿಭಟನೆಯ ಕಿಚ್ಚಲ್ಲಿ ಬೇಯುತ್ತಿದೆ. ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೆ ಪ್ರತಿಭಟನೆಗಳು ಜೋರಾಗಿವೆ. ಸರಕಾರದ ನಿಷ್ಠಾವಂತರು ಮತ್ತು ಸರ್ಕಾರ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದರೊಬ್ಬರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ.
ಸಂಸದ ಅಮರಕೀರ್ತಿ ಆತುಕೋರಲ ತೆರಳುತ್ತಿದ್ದಾಗ ನಿಟ್ಟಂಬುವದಲ್ಲಿ ಅವರ ಕಾರನ್ನು ಪ್ರತಿಭಟನಾಕಾರರ ಗುಂಪೊಂದು ತಡೆದು ನಂತರ ಗುಂಡು ಹಾರಿಸಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ನಂತರ ಸಾವನ್ನಪ್ಪಿದ್ದಾರೆ. ಇನ್ನು ಸಂಸದರು ತಮ್ಮ ಪಿಸ್ತೂಲ್ ನಿಂದ ಪ್ರತಿಭಟನಾಕಾರನ ಮೇಲೆ ಗುಂಡು ಹಾರಿಸಿ ನಂತರ ತಾವು ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
76 ವರ್ಷದ ಮಹಿಂದ ರಾಜಪಕ್ಸೆ ಅವರು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಕಿರಿಯ ಸಹೋದರ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರಿಗೆ ಸಲ್ಲಿಸಿದ್ದಾರೆ.
ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದೇಶಕ್ಕೆ ಮಾರ್ಗದರ್ಶನ ಮಾಡಲು ನೀವು ಸರ್ವಪಕ್ಷ ಸರ್ಕಾರವನ್ನು ನೇಮಿಸಲು ಸಾಧ್ಯವಾಗುವಂತೆ ನಾನು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಮಹಿಂದಾ ರಾಜಪಕ್ಸೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಈಗ ಸಚಿವ ಸಂಪುಟ ವಿಸರ್ಜನೆಯಾಗಿದೆ. ರಾಜಪಕ್ಸೆ ವಂಶದ ಸದಸ್ಯರ ನೇತೃತ್ವದ ಯಾವುದೇ ಸರ್ಕಾರವನ್ನು ಸೇರಲು ಅತಿದೊಡ್ಡ ವಿರೋಧ ಪಕ್ಷ ನಿರಾಕರಿಸಿದೆ.
ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ದೊಡ್ಡ ಘರ್ಷಣೆಗಳು ಜರುಗಿತ್ತು ದೇಶ ಸಂಕಷ್ಟಕ್ಕೆ ಸಿಲುಕಿದೆ.