ನವದೆಹಲಿ: ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಥೈಲ್ಯಾಂಡ್ ರಾಷ್ಟ್ರದ ಬ್ಯಾಂಕಾಕ್ ಇಂಪ್ಯಾಕ್ಟ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸಿ ಥಾಮಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ವಿಜಯದ ಬಳಿಕ ಪ್ರಧಾನಿ ಮೋದಿ, ಭಾರತೀಯ ಬ್ಯಾಡ್ಮಿಂಟನ್ ತಂಡವು ಇತಿಹಾಸವನ್ನು ಸೃಷ್ಟಿಸಿದೆ. ಭಾರತ ಥಾಮಸ್ ಕಪ್ ಗೆದ್ದ ನಂತರ ಇಡೀ ದೇಶವೇ ಸಂಭ್ರಮಿಸಿದೆ. ನಮ್ಮ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಆಟಗಾರರಿಗೆ ಸ್ಫೂರ್ತಿಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮೋದಿ ಅವರು ತಂಡದೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಭಿನಂದಿಸಿದರು.
ಈ ಮಧ್ಯೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಂಡಕ್ಕೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಠಾಕೂರ್ ಅವರು ಟ್ವೀಟ್ ಮಾಡಿ, ಇತಿಹಾಸ ಸೃಷ್ಟಿಯಾಗಿದೆ. ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳು. ಮಲೇಷ್ಯಾ, ಡೆನ್ಮಾರ್ಕ್ ಮತ್ತು ಇಂಡೋನೇಷ್ಯಾವನ್ನು ಸೋಲಿಸುವ ಮೂಲಕ ಈ ಅಸಾಮಾನ್ಯ ಸಾಧನೆಯನ್ನು ಸಾಧಿಸಿದ ತಂಡವು ದೇಶದ ಸಮಾನ ಮನ್ನಣೆಗೆ ಅರ್ಹವಾಗಿದೆ ಎಂದು ಬರೆದಿದ್ದಾರೆ.
14 ಬಾರಿ ಥಾಮಸ್ ಕಪ್ ವಿಜೇತ ಇಂಡೋನೇಷ್ಯಾವನ್ನು ಸೋಲಿಸಿದ ಭಾರತ ತಂಡಕ್ಕೆ ಸಚಿವಾಲಯದ ಕ್ರೀಡಾ ಇಲಾಖೆಯು 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದೆ ಎಂದು ಅವರು ತಿಳಿಸಿದ್ದಾರೆ.
ತಂಡವನ್ನು ಅಭಿನಂದಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳು. ಇದು ಅನೇಕ ಯುವ ಭಾರತೀಯರಿಗೆ ಸ್ಫೂರ್ತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅಸ್ಸಾಂನ ಮುಖ್ಯಮಂತ್ರಿ ಮತ್ತು ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಿಮಂತ ಬಿಸ್ವಾ ಶರ್ಮಾ, ಭಾರತೀಯ ಬ್ಯಾಡ್ಮಿಂಟನ್ ಹೊಸ ಎತ್ತರದತ್ತ ಸಾಗುತ್ತಿದೆ. ಈ ಪ್ರತಿಷ್ಠಿತ ಬ್ಯಾಡ್ಮಿಂಟನ್ ತಂಡ ಟೂರ್ನಮೆಂಟ್‌ನ 73 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದಕ್ಕಾಗಿ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ನೀವು ನಮಗೆಲ್ಲರಿಗೂ ಹೆಮ್ಮೆ ತಂದಿದ್ದೀರಿ ಎಂದು ಸಂತಸ ಹಂಚಿಕೊಂಡಿದ್ದಾರೆ.