ನವದೆಹಲಿ: ಹಿಂದೂಗಳ ಸಂಖ್ಯೆ ಕಡಿಮೆ ಇರುವ ರಾಜ್ಯಗಳಲ್ಲಿ ಅವರನ್ನು ಅಲ್ಪಸಂಖ್ಯಾತರು ಎಂದು ಘೋಷಿಸುವ ವಿಚಾರದಲ್ಲಿ ತನ್ನ ನಿಲುವನ್ನು ಬದಲಿಸಿದ ಕೇಂದ್ರ ಸರ್ಕಾರದ ನಡೆ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
ಹಿಂದೂಗಳು ಹಾಗೂ ಇತರೆ ಸಮುದಾಯದವರ ಸಂಖ್ಯೆ ಕಡಿಮೆ ಇದ್ದರೆ ಆ ರಾಜ್ಯದ ವ್ಯಾಪ್ತಿಯಲ್ಲಿ ಅವರನ್ನು ಅಲ್ಪಸಂಖ್ಯಾತರು ಎಂದು ಘೋಷಿಸಬಹುದು ಎಂದು ಮಾರ್ಚ್ 27ರಂದು ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಹೇಳಿತ್ತು.
ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ಕೇಂದ್ರ ಸರ್ಕಾರವು ಈ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳದ ಕಾರಣ, ಅನಿಶ್ಚಿತತೆ ಉಳಿದುಕೊಂಡಿದೆ ಎಂದು ಹೇಳಿತು.
ಹಿಂದೂಗಳ ಜನಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ, ಸಮುದಾಯಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಕುರಿತಂತೆ ರಾಜ್ಯಗಳು ಹಾಗೂ ಸಂಬಂಧಪಟ್ಟವರ ಜೊತೆ ಸಮಾಲೋಚನೆ ನಡೆಸಲು ಕೇಂದ್ರ ಸರ್ಕಾರಕ್ಕೆ ಮೂರು ತಿಂಗಳು ಕಾಲಾವಕಾಶ ನೀಡಲು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ ಪೀಠ ನಿರ್ಧರಿಸಿತು.
ಕೇಂದ್ರ ಸರ್ಕಾರವು ಈ ಹಿಂದೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತೆಗೆದುಕೊಂಡಿದ್ದ ನಿಲುವಿಗಿಂತ ಭಿನ್ನವಾದ ನಿಲುವು ಮತ್ತೊಂದು ಪ್ರಮಾಣಪತ್ರದಲ್ಲಿ ಇದೆ ಎಂಬ ವಿಚಾರವನ್ನು ಅರ್ಜಿದಾರರು ಗಮನಕ್ಕೆ ತಂದಿದ್ದಾರೆ ಎಂದು ಕೋರ್ಟ್ ಹೇಳಿತು. ಅಲ್ಪಸಂಖ್ಯಾತರು ಎಂದು ಘೋಷಿಸುವುದಕ್ಕೂ ಮುನ್ನ ಸಮಾಲೋಚನೆ ನಡೆಸಬೇಕಿದೆ ಎಂದು ಪ್ರಮಾಣಪತ್ರದಲ್ಲಿ ಕೇಂದ್ರ ಹೇಳಿದೆ. ಆದರೆ, ಈ ರೀತಿ ಭಿನ್ನ ನಿಲುವು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿರ್ಣಯ ತೆಗೆದುಕೊಳ್ಳುವುದು ಮುಖ್ಯ ಎಂದು ಪೀಠ ಹೇಳಿತು.
ಮುಂದಿನ ವಿಚಾರಣೆಯನ್ನು ಆಗಸ್ಟ್ 30ಕ್ಕೆ ನಿಗದಿಪಡಿಸಿತು.