HEALTH TIPS

ಹಿಮಾಲಯದ ನೀರ್ಗಲ್ಲುಗಳು ಕರಗುವುದರಿಂದ ಗಂಗಾನದಿಯು ಬತ್ತುವುದಿಲ್ಲ: ಅಧ್ಯಯನ ವರದಿ

                ನವದೆಹಲಿಹಿಮಾಲಯದ ನೀರ್ಗಲ್ಲುಗಳು ತ್ವರಿತವಾಗಿ ಕರಗುತ್ತಿವೆ ಮತ್ತು ಭಾರತದ ನದಿಗಳು ಬತ್ತುವುದರೊಂದಿಗೆ ನೀರ್ಗಲ್ಲುಗಳ ಕಣ್ಮರೆಯು ವಿನಾಶಕಾರಿ ಪರಿಣಾಮಗಳನ್ನುಂಟು ಮಾಡಲಿದೆ ಎಂಬ ಹೇಳಿಕೆಗಳು ಸುಳ್ಳು ಮತ್ತು ಅನಗತ್ಯ ಭೀತಿಯನ್ನು ಹುಟ್ಟಿಸುವಂಥದ್ದಾಗಿವೆ ಎಂದು ನೂತನ ಅಧ್ಯಯನ ವರದಿಯೊಂದು ಹೇಳಿದೆ.

               ನೀರ್ಗಲ್ಲುಗಳ ಕರಗುವಿಕೆಯು ಗಂಗಾ,ಸಿಂಧೂ ಮತ್ತು ಬ್ರಹ್ಮಪುತ್ರ ನದಿಗಳ ನೀರಿನ ಹರಿವಿನಲ್ಲಿ ಶೇ.1ರಷ್ಟು ಪಾಲನ್ನೂ ಹೊಂದಿಲ್ಲ ಎಂದು ವರದಿಯು ತಿಳಿಸಿದೆ.

‌              ಮಳೆ ಮತ್ತು ಹಿಮ ಕರಗುವಿಕೆ ಹೆಚ್ಚುಕಡಿಮೆ ಎಲ್ಲ ನದಿಗಳಲ್ಲಿ ನೀರಿನ ಹರಿವಿಗೆ ಕಾರಣವಾಗಿವೆ ಮತ್ತು ನೀರ್ಗಲ್ಲುಗಳು ಅಂತಿಮವಾಗಿ (ಹಲವಾರು ಶತಮಾನಗಳ ನಂತರ) ಕಣ್ಮರೆಯಾದ ಬಳಿಕವೂ ಈ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ಕಾಟೊ ಇನ್‌ಸ್ಟಿಟ್ಯೂಟ್‌ಗಾಗಿ ಹಿರಿಯ ಸಂಪಾದಕ ಸ್ವಾಮಿನಾಥನ್ ಎಸ್.ಅಂಕ್ಲೇಸರಿಯಾ ಮತ್ತು ನೀರ್ಗಲ್ಲು ತಜ್ಞ ವಿ.ಕೆ.ರೈನಾ ಅವರು ಸಿದ್ಧಪಡಿಸಿರುವ ವರದಿಯು ಸ್ಪಷ್ಟಪಡಿಸಿದೆ.

               ನೀರ್ಗಲ್ಲುಗಳ ಕರಗುವಿಕೆಯು ನದಿಗಳ ಹರಿವಿನ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಮತ್ತು ನದಿಗಳು ಒಣಗುವುದೂ ಇಲ್ಲ ಎಂದು ನೂತನ ಅಧ್ಯಯನದಲ್ಲಿ ಬೆಳಕಿಗೆ ಬಂದಿರುವ ಗಮನಾರ್ಹ ಅಂಶಗಳಿಗೆ ವರದಿಯು ಒತ್ತು ನೀಡಿದೆ. ಹಿಂದಿನ ಅಧ್ಯಯನಗಳು ಹಿಮ ಕರಗುವಿಕೆಯನ್ನು ನೀರ್ಗಲ್ಲು ಕರಗುವಿಕೆ ಎಂದು ತಪ್ಪಾಗಿ ಗ್ರಹಿಸಿದ್ದವು ಎಂದು ಅದು ಬೆಟ್ಟು ಮಾಡಿದೆ.

ಹಿಮಾಲಯದ ನೀರ್ಗಲ್ಲುಗಳು 11,700 ವರ್ಷಗಳ ಹಿಂದೆ ಹಿಮಯುಗದ ಅಂತ್ಯದಿಂದಲೂ ಕರಗುತ್ತಿವೆ ಮತ್ತು ಚದುರುತ್ತಿವೆ. ಆದರೆ ಇತ್ತೀಚಿಗೆ ತಾಪಮಾನ ಹೆಚ್ಚಾಗಿದ್ದರೂ ಕರಗುವಿಕೆಯು ಹೆಚ್ಚಿನ ವೇಗವನ್ನು ಪಡೆದುಕೊಂಡಿಲ್ಲ ಎಂದು ವರದಿಯು ಹೇಳಿದೆ. ಇತ್ತೀಚಿನ ಅಧ್ಯಯನಗಳು ಮತ್ತು ಇಸ್ರೋದ ಉಪಗ್ರಹ ದತ್ತಾಂಶಗಳನ್ನು ವರದಿಯು ಉಲ್ಲೇಖಿಸಿದೆ.

           ಹಿಂದುಗಳಿಗೆ ಅತ್ಯಂತ ಪವಿತ್ರ ನದಿಯಾಗಿರುವ ಗಂಗೆಯ ಮೂಲವಾಗಿರುವ ಗಂಗೋತ್ರಿ ಹಿಮನದಿ ಅಥವಾ ನೀರ್ಗಲ್ಲು ಕರಗುವಿಕೆಯ ಬಗ್ಗೆ ಈ ಹಿಂದೆ ಆಗಾಗ್ಗೆ ಕಳವಳಗಳನ್ನು ವ್ಯಕ್ತಪಡಿಸಲಾಗಿದೆ. ಈ ನೀರ್ಗಲ್ಲು 30 ಕಿ.ಮೀ.ಉದ್ದವಿದ್ದು, ಹಿಮಾಲಯದಲ್ಲಿ ಎರಡನೇ ಬೃಹತ್ ಗಾತ್ರದ್ದಾಗಿದೆ. ವೇಗವರ್ಧನೆಯ ಬದಲು ಅದರ ಚದುರುವಿಕೆಯು ಇತ್ತೀಚಿನ ವರ್ಷಗಳಲ್ಲಿ ವರ್ಷಕ್ಕೆ 10 ಮೀ.ಗಳಷ್ಟು ಕಡಿಮೆಯಾಗಿದೆ. ಈ ದರದಲ್ಲಿ ಇನ್ನೂ 3,000 ವರ್ಷಗಳ ಕಾಲ ಅದು ಅಸ್ತಿತ್ವದಲ್ಲಿರಲಿದೆ ಎಂದು ಅಧ್ಯಯನ ವರದಿಯು ತಿಳಿಸಿದೆ.

            ಹಿಮಾಲಯದ ನೀರ್ಗಲ್ಲುಗಳ ಚದುರುವಿಕೆಯ ವೇಗ ಮತ್ತು ಪರಿಣಾಮಗಳನ್ನು ಮಾಧ್ಯಮಗಳು ಮತ್ತು ಪರಿಸರ ಕಾರ್ಯಕರ್ತರು ಉತ್ಪ್ರೇಕ್ಷಿಸಿದ್ದಾರೆ ಎಂದು ಹೇಳಿರುವ ವರದಿಯ ಲೇಖಕರು, ಹಿಮಾಲಯದ ಎಲ್ಲ ನೀರ್ಗಲ್ಲುಗಳು 2035ರ ವೇಳೆಗೆ ಕರಗಬಹುದು ಎಂಬ ನೊಬೆಲ್ ಪುರಸ್ಕೃತ ಹವಾಮಾನ ಬದಲಾವಣೆ ಕುರಿತು ಅಂತರಸರಕಾರಿ ಸಮಿತಿ (ಐಪಿಸಿಸಿ)ಯ 2007ರ ವರದಿಯನ್ನು ತಳ್ಳಿಹಾಕಿದೆ. ವಿಶ್ವಾದ್ಯಂತ ಆತಂಕವನ್ನುಂಟು ಮಾಡಿದ್ದ ತನ್ನ ಪ್ರತಿಪಾದನೆಯಿಂದ ಐಪಿಸಿಸಿ ಬಳಿಕ ಹಿಂದೆ ಸರಿದಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries