ನವದೆಹಲಿ: ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ನರೇಗಾ ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಚಾರ್ಟರ್ಡ್ ಅಕೌಂಟೆಂಟ್‌ನನ್ನು ಮನಿ ಲಾಂಡರಿಂಗ್(ತಡೆಗಟ್ಟುವಿಕೆ) ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶನಿವಾರ ಬಂಧಿಸಿದೆ.
ಸಿಎ ಸುಮನ್ ಕುಮಾರ್ ಅವರನ್ನು ಪಿಎಂಎಲ್‌ಎ ಅಡಿಯಲ್ಲಿ ಸಂಜೆ 5 ಗಂಟೆಗೆ ರಾಂಚಿಯಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಅಲ್ಲಿ ಜಾರಿ ನಿರ್ದೇಶನಾಲಯವು ಕಸ್ಟಡಿಗೆ ಕೋರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಜಾರ್ಖಂಡ್ ನ ಹಿರಿಯ ಐಎಎಸ್ ಅಧಿಕಾರಿ ಮತ್ತು ಜಾರ್ಖಂಡ್ ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್, ಅವರ ಪತಿ ಮತ್ತು ಇತರ ನಿಕಟ ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿ ಸುಮಾರು 19.31 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿತ್ತು.
ಜಾರ್ಖಂಡ್, ಬಿಹಾರ, ದೆಹಲಿ ಹಾಗೂ ಇತರ ನಗರಗಳ 18 ಸ್ಥಳಗಳಲ್ಲಿ ದಾಳಿ ನಡೆಸಿದ ಇಡಿ, ಒಟ್ಟು 19.31 ಕೋಟಿ ನಗದನ್ನು ವಶಪಡಿಸಿಕೊಂಡಿದೆ. ಅದರಲ್ಲಿ 17 ಕೋಟಿ ಸಿಂಘಾಲ್ ಅವರ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಸ್ಥಳದಲ್ಲಿ ದಾಳಿ ಮಾಡಿ 1.8 ಕೋಟಿ ರೂ ವಶಕ್ಕೆ ತೆಗೆದುಕೊಂಡಿದೆ.
ರಾಂಚಿಯ ಪಲ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಪೂಜಾ ಸಿಂಘಾಲ್ ಪತಿ ಅಭಿಷೇಕ್ ಝಾ, ಸಹೋದರ ಸಿದ್ಧಾರ್ಥ್ ಸಿಂಘಾಲ್, ಕೋಲ್ಕತ್ತಾದಲ್ಲಿ ಆಕೆಯ ಅತ್ತೆ, ಪೋಷಕರು ಮತ್ತು ಇತರ ಸಂಬಂಧಿಕರ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
2008 ಮತ್ತು 2011 ರ ನಡುವೆ 18.06 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಿರಿಯ ಎಂಜಿನಿಯರ್ ರಾಮ್ ಬಿನೋದ್ ಪ್ರಸಾದ್ ಸಿನ್ಹಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು 2017 ರಲ್ಲಿ ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿ ಇಡಿ ಈ ದಾಳಿ ನಡೆಸಿದೆ. ತರುವಾಯ, ಇಡಿ ಸಿನ್ಹಾಗೆ ಸೇರಿದ 4.8 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು ಮತ್ತು 2020ರಲ್ಲಿ ಅವರ ವಿರುದ್ಧ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತು. ತನಿಖೆ ಸಮಯದಲ್ಲಿ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಹೆಸರು ಕೂಡ ಕೇಳಿಬಂದಿತ್ತು.