ತಿರುವನಂತಪುರ: ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಮುಂಗಾರು ವ್ಯಾಪಿಸುತ್ತಿದೆ ಎಂದು ವರದಿಯಾಗಿದೆ. ಕೇಂದ್ರ ಹವಾಮಾನ ಇಲಾಖೆಯ ಪ್ರಕಾರ, ಮುಂಗಾರು ನೈಋತ್ಯ ಅರಬ್ಬಿ ಸಮುದ್ರ, ಆಗ್ನೇಯ ಅರಬ್ಬಿ ಸಮುದ್ರದ ಬಹುತೇಕ ಭಾಗಗಳು, ಮಾಲ್ಡೀವ್ಸ್‍ನ ಕೊಮರಿನ್ ಪ್ರದೇಶ ಮತ್ತು ಬಂಗಾಳ ಕೊಲ್ಲಿಯವರೆಗೂ ವಿಸ್ತರಿಸಲಿದೆ.
ಮುಂದಿನ 48 ಗಂಟೆಗಳಲ್ಲಿ ಮಾನ್ಸೂನ್ ದಕ್ಷಿಣ ಅರಬ್ಬಿ ಸಮುದ್ರ, ಮಾಲ್ಡೀವ್ಸ್ ಮತ್ತು ಪಕ್ಕದ ಲಕ್ಷದ್ವೀಪ ಪ್ರದೇಶವನ್ನು ತಲುಪುವ ನಿರೀಕ್ಷೆಯಿದೆ. ಕೇರಳದಲ್ಲಿ ಮುಂಗಾರು ಆಗಮನದ ಮೇಲೆ ನಿಗಾ ಇಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಗುಡುಗು ಸಹಿತ ಮಳೆ ಮತ್ತು ಬಲವಾದ ಗಾಳಿ ಉಂಟಾಗಲಿದೆ ಎಂದು ಸೂಚಿಸಲಾಗಿದೆ.