ನವದೆಹಲಿ: ನಿವೃತ್ತಿ ಅಥವಾ ಸೇವೆಯಿಂದ ರಾಜೀನಾಮೆ ನೀಡಿದ ತಕ್ಷಣ ಸರ್ಕಾರಿ ನೌಕರರು ಚುನಾವಣೆಗೆ ಸ್ಪರ್ಧಿಸಲು ವಿರಾಮ ಅವಧಿಯನ್ನು (ಕೂಲಿಂಗ್ ಆಫ್ ಪೀರಿಯಡ್) ವಿಧಿಸುವುದಕ್ಕಾಗಿ ನಿರ್ಬಂಧಗಳನ್ನು ಹೇರುವ ಸಲುವಾಗಿ ಕಾನೂನು ರೂಪಿಸಲು ಶಾಸಕಾಂಗಕ್ಕೆ ನಿರ್ದೇಶನ ನೀಡಲಾಗುವುದಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸ್ವೀಕರಿಸಲು ನಿರಾಕರಿಸಿದೆ.
ಸರ್ಕಾರಿ ನೌಕರರು ನಿವೃತ್ತಿ ಅಥವಾ ರಾಜೀನಾಮೆ ನೀಡಿದ ಬಳಿಕ ಚುನಾವಣೆಗೆ ಸ್ಪರ್ಧಿಸಬಹುದೇ, ಇದಕ್ಕಾಗಿ ವಿರಾಮ ಅವಧಿಯನ್ನು ಹೊಂದಿರಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸಂಬಂಧಪಟ್ಟ ಶಾಸಕಾಂಗಕ್ಕೆ ಬಿಡುವುದು ಉತ್ತಮ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಹೇಳಿದೆ.
'ಅರ್ಜಿದಾರರ ಅಥವಾ ಅರ್ಜಿದಾರರು ಪ್ರತಿನಿಧಿಸುವ ಗುಂಪಿನ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯ ದೂರುಗಳಿಲ್ಲ. ಸರ್ಕಾರಿ ನೌಕರರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆಯ ಮೇಲೆ ನಿರ್ಬಂಧಗಳನ್ನು ಹೇರುವ ನಿಯಮಗಳನ್ನು ರೂಪಿಸಲು ಶಾಸಕಾಂಗಕ್ಕೆ ನಿರ್ದೇಶಿಸುವ ಕಡ್ಡಾಯ ಆದೇಶವನ್ನು ಪಡೆಯುವ ಮೂಲಭೂತ ಹಕ್ಕು ಯಾರಿಗೂ ಇಲ್ಲ. ಹೀಗಾಗಿ ಈ ರಿಟ್ ಅರ್ಜಿಯನ್ನು ಪುರಸ್ಕರಿಸುವುದಿಲ್ಲ' ಎಂದು ನ್ಯಾಯಪೀಠ ಹೇಳಿದೆ.