ಕಾಸರಗೋಡು: ಕಾಸರಗೋಡಿನ ಚೆರುವತ್ತೂರಿನಲ್ಲಿ ವಿಷಾಹಾರ ಸೇವಿಸಿ ಚಿಕಿತ್ಸೆಯಲ್ಲಿರುವವರಿಗೆ ಶಿಗೆಲ್ಲ ಸೋಂಕು ಕೂಡ ದೃಢಪಟ್ಟಿದೆ. ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ಮಕ್ಕಳಲ್ಲಿ ರೋಗ ದೃಢಪಟ್ಟಿದೆ. ಎಲ್ಲರ ಆರೋಗ್ಯ ತೃಪ್ತಿಕರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಶವರ್ಮಾ ಸೇವಿಸಿ ವಿಷ ಬಾಧೆಗೊಳಗಾಗಿದ್ದ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೇ ವೇಳೆ ಶವರ್ಮಾ ಸೇವಿಸಿ ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಬಂಧಿಸಲಾಗಿದೆ. ಕೂಲ್ ಬಾರ್ ಮ್ಯಾನೇಜರ್ ಹಾಗೂ ಕಾಸರಗೋಡು ಮೂಲದ ಟಿ ಅಹಮದ್ ನನ್ನು ಪೋಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಚೆರುವತ್ತೂರು ಐಡಿಯಲ್ ಫುಡ್‍ಪಾಯಿಂಟ್‍ನ ಮ್ಯಾನೇಜಿಂಗ್ ಪಾಲುದಾರ ಮಂಗಳೂರಿನ ವ್ಯಕ್ತಿ ಅನಕೂಸ್ ಮತ್ತು ಶವರ್ಮಾ ತಯಾರಿಸುತ್ತಿದ್ದ ನೇಪಾಳಿ ಪ್ರಜೆ ರಾಯ್ ಅವರನ್ನು ನಿನ್ನೆ ಪೋಲೀಸರು ಬಂಧಿಸಿದ್ದರು.
ಚೆರುವತ್ತೂರಿನ ಬಸ್ ನಿಲ್ದಾಣದ ಬಳಿ ಇರುವ ಐಡಿಯಲ್ ಫುಡ್ ಪಾಯಿಂಟ್ ನಲ್ಲಿ ಶವರ್ಮಾ ಸೇವಿಸಿದ್ದ ಪ್ಲಸ್ ಟು ವಿದ್ಯಾರ್ಥಿನಿ ದೇವಾನಂದೆ ಮೃತಪಟ್ಟಿದ್ದಳು. ಶವರ್ಮಾ ಸೇವಿಸಿದ್ದ ಇತರ 17 ವಿದ್ಯಾರ್ಥಿಗಳು ದೈಹಿಕ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಹೋಟೆಲ್‍ನಿಂದ ಶವರ್ಮಾ ಸೇವಿಸಿದ್ದರು. ಭಾನುವಾರ ಬೆಳಗ್ಗೆ ವಾಂತಿ, ಹೊಟ್ಟೆ ನೋವು ಮತ್ತು ಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡಿತು. ಬಳಿಕ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಯಿತಾದರೂ ಕೊನೆಯುಸಿರೆಳೆದಳು.