ಶ್ರೀನಗರ: ಕಾಶ್ಮೀರದ ಫ್ರೀಲ್ಯಾನ್ಸ್ ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ 'ಫೀಚರ್ ಫೋಟೋಗ್ರಫಿ-2022' ವಿಭಾಗದಲ್ಲಿ ಪ್ರತಿಷ್ಟಿತ ಪುಲಿಟ್ಝರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತದಲ್ಲಿ ಕೋವಿಡ್ -19 ಬಿಕ್ಕಟ್ಟಿನ ವೇಳೆ ತೆಗೆದ ಚಿತ್ರಗಳಿಗಾಗಿ ದಿವಂಗತ ಡ್ಯಾನಿಶ್ ಸಿದ್ದಿಕಿ, ಅಮಿತ್ ಡೇವ್ ಮತ್ತು ಅದ್ನಾನ್ ಅಬಿದಿ ಸೇರಿದಂತೆ ಸನ್ನಾ ರಾಯಿಟರ್ಸ್ ತಂಡದೊಂದಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
'ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ಮತ್ತು ರಾಯಿಟರ್ಸ್ ಕುಟುಂಬದ ದಿವಂಗತ ಡ್ಯಾನಿಶ್ ಸಿದ್ದೀಕಿ ಅವರಿಗೆ ಅಭಿನಂದನೆಗಳು.' ಎಂದು ಪುಲಿಟ್ಜರ್ ಟ್ವಿಟ್ಟರ್ ನಲ್ಲಿ ಪ್ರಶಸ್ತಿಯನ್ನು ಘೋಷಿಸಿದೆ.
ಕಾಶ್ಮೀರದ ಸೆಂಟ್ರಲ್ ಯೂನಿವರ್ಸಿಟಿಯಿಂದ ಕನ್ವರ್ಜೆಂಟ್ ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸನ್ನಾ, ಅಲ್ ಜಝೀರಾ, ಟೈಮ್ ಮತ್ತು ಟಿಆರ್‌ಟಿ ವರ್ಲ್ಡ್ ಸೇರಿದಂತೆ ಹಲವು ಅಂತರಾಷ್ಟ್ರೀಯ ಮಾಧ್ಯಮಗಳಿಗಾಗಿ ಕೆಲಸ ಮಾಡಿದ್ದಾರೆ. 2021 ರಲ್ಲಿ ಅವರು ಪ್ರತಿಷ್ಠಿತ ಮ್ಯಾಗ್ನಮ್ ಫೌಂಡೇಶನ್‌ನೊಂದಿಗೆ ಫೆಲೋಶಿಪ್ ಮಾಡಿದ್ದಾರೆ.
ಕೋವಿಡ್ ಸಂದರ್ಭದ ಭಾರತವನ್ನು ತಮ್ಮ ಕ್ಯಾಮರಾಗಳಲ್ಲಿ ಹಿಡಿದಿಟ್ಟ ರೀತಿ ಅತ್ಯಂತ ಮಾರ್ಮಿಕವಾಗಿದ್ದು, ವಿನಾಶದ ಭೀತಿಯನ್ನು ಹಿಡಿದಿಟ್ಟ ಬಗೆ ಯಾರನ್ನೂ ಪ್ರಭಾವಿಸದೆ ಇರಲಾರವು. ಈ ಛಾಯಾಚಿತ್ರಗಳ ಒಳನೋಟ, ಆಳಅರ್ಥಗಳು ಗಂಭೀರಭಾವವನ್ನು ಹುಟ್ಟುಹಾಕುತ್ತವೆ ಎಂದು ಪುಲಿಟ್ಝರ್ ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.
ಪ್ರಶಸ್ತಿಗೆ ಭಾಜನರಾಗಿರುವ ನಾಲ್ವರು ಫೊಟೋಗ್ರಾಫರ್‌ಗಳಲ್ಲಿರುವ ಒಬ್ಬರಾದ ಡ್ಯಾನಿಷ್ ಸಿದ್ದೀಖಿ, 2021ರ ಜುಲೈನಲ್ಲಿ ಅಫ್ಘಾನಿಸ್ತಾನ್ ಮತ್ತು ತಾಲಿಬಾನಿಗಳ ನಡುವೆ ನಡೆಯುತ್ತಿದ್ದ ಯುದ್ಧದ ಸಂದರ್ಭದಲ್ಲಿ ತೀವ್ರ ಸಂಘರ್ಷದ ಮಧ್ಯೆ ವರದಿ ಮಾಡುವಾಗ ಹತ್ಯೆಗೀಡಾಗಿದ್ದರು. ಇವರಿಗೆ 2018ರಲ್ಲಿಯೂ ಫೀಚರ್ ಫೋಟೊಗ್ರಫಿ ವಿಭಾಗದಲ್ಲಿ ಪುಲಿಟ್ಕರ್ ಪ್ರಶಸ್ತಿ ದೊರೆತಿತ್ತು.