ಕಾಸರಗೋಡು: ಕೇರಳದಲ್ಲಿ ಸರ್ಕಾರಿ ಸಂಸ್ಥೆಗಳು ಸಿಪಿಎಂ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ತಿಳಿಸಿದ್ದಾರೆ.
20 ಮಂದಿ ಸಿಪಿಎಂ ಕಾರ್ಯಕರ್ತರ ಅಕ್ರಮ ನೇಮಕಾತಿ ವಿರೋಧಿಸಿ ಬಿಜೆಪಿ ಉದುಮ ಕ್ಷೇತ್ರ ಸಮಿತಿಯಿಂದ ಮದ್ಯ ಮಾರಾಟ ಕೇಂದ್ರ 'ಬೆವ್ಕೋ' ಬಟ್ಟತ್ತೂರು ಗೋದಾಮಿನ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.
ಕೇವಲ ಸಿಪಿಎಂ ಮತ್ತು ಡಿವೈಎಫ್‍ಐ ಕಾರ್ಯಕರ್ತರೆಂಬ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸಂಸ್ಥೆಗಳಲ್ಲಿ ಖಾಯಂ ನೇಮಕಾತಿ ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆ. ಶ್ರಮವಹಿಸಿ ಓದಿ ಪಿಎಸ್‍ಸಿ ಮೂಲಕ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿರುವ ಯುವಕರಿಗೆ ಪಿಣರಾಯಿ ಸರ್ಕಾರ ವಂಚನೆಯೆಸಗುತ್ತಿದೆ. ಸರ್ಕಾರದ ಇಂತಹ ಧೋರಣೆಯಿಂದ ಪಿಎಸ್‍ಸಿಯಂತಹ ಸಂಸ್ಥೆಯನ್ನು ವಿಸರ್ಜಿಸುವುದು ಲೇಸು ಎಂದು ತಿಳಿಸಿದರು. ಬೆವ್ಕೋ ಹೊರಗುತ್ತಿಗೆ ಮೂಲಕ 426 ಜನರನ್ನು ಕಾಯಂ ಆಧಾರದ ಮೇಲೆ ನೇಮಿಸಿಕೊಂಡಿದೆ. ಇಂತಹ. ನೇಮಕಾತಿಯಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಯಾವುದೇ ಮಾನದಂಡವಿಲ್ಲದೆ ನಡೆಸಿರುವ ನೇಮಕಾತಿಯನ್ನು ಸರ್ಕಾರ ರದ್ದುಪಡಿಸಿ ಅರ್ಹರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಉದುಮ ಕ್ಷೇತ್ರದ ಅಧ್ಯಕ್ಷ ಕೆ.ಟಿ.ಪುರುಷೋತ್ತಮನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರಂ, ಸಮಿತಿ ಸದಸ್ಯ ವೈ.ಕೃಷ್ಣದಾಸ್ ಮುಂತಾದವರು ಉಪಸ್ಥಿತರಿದ್ದರು. ಧರಣಿಗೂ ಮೊದಲು ಮಹಿಳೆಯರು ಸಏರಿದಂತೆ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದರು.