ನವದೆಹಲಿ: ಸೇನೆಯ ಕ್ಯಾಂಟೀನ್ ಮತ್ತು ಮಳಿಗೆಗಳಿಗೆ ಪಡಿತರ ಹಾಗೂ ಇತರ ಸಾಮಗ್ರಿಗಳ ಖರೀದಿಯಲ್ಲಿ ಕ್ಷೇತ್ರಾಧಿಕಾರಿಗಳು ಮತ್ತು ಪೂರೈಕೆದಾರರೊಂದಿಗೆ ಷಾಮೀಲಾಗಿ ಭ್ರಷ್ಟಾಚಾರ ನಡೆಸಿದ ಆರೋಪದಲ್ಲಿ ಪೋರ್ಟ್‌ಬ್ಲೇರ್‌ನಲ್ಲಿ ನಿಯೋಜಿತರಾಗಿರುವ ಸೇನಾಧಿಕಾರಿಯೊಬ್ಬರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಅಭಿಷೇಕ್ ಚಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 2018ರಲ್ಲಿ ವಿವಿಧ ಪೂರೈಕೆದಾರರಿಂದ ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ.
2018ರಲ್ಲಿ ಅಭಿಷೇಕ್ ಚಂದ್ರ ಅವರು ಕೋಲ್ಕತ್ತ ಮೂಲದ ರೋಚಕ್ ಆಗ್ರೋ ಫುಡ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಶ್ರೀಸುಭಮ್ ಚೌಧರಿ ಮತ್ತು ಅದರ ಪ್ರತಿನಿಧಿ ದಯಾಳ್ ಚಂದ್ರ ದಾಸ್ ಅವರೊಂದಿಗೆ ಷಾಮೀಲಾಗಿ ನಗದು ರೂಪದ ಲಂಚಕ್ಕೆ ಪ್ರತಿಯಾಗಿ ಉಡುಗೊರೆ ಪಡೆಯಲು ಪಿತೂರಿ ನಡೆಸಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ
ಚಂದ್ರು ಅವರು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸೇನೆಯ ಕ್ಯಾಂಟೀನ್ ಮತ್ತು ಮಳಿಗೆಗಳಿಗೆ ಪಡಿತರ ಮತ್ತು ಇತರ ಸಾಮಗ್ರಿಗಳ ಪೂರೈಕೆಗೆ ಪೂರೈಕೆದಾರರೊಂದಿಗೆ ಷಾಮೀಲಾಗಿ ಭ್ರಷ್ಟಾಚಾರ ನಡೆಸಿದ್ದಾರೆ. ಕೋಲ್ಕತ್ತ ಮೂಲದ ರೋಚಕ್ ಆಗ್ರೋ ಫುಡ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಚೌಧರಿ ಅವರಿಗೆ ₹ 75 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಹಣವನ್ನು ಚೆಕ್ ಇಲ್ಲವೇ ತನಿಷ್ಕ್ ಆಭರಣ ಮಳಿಗೆಯ ಗಿಫ್ಟ್ ವೋಚರ್ ರೂಪದಲ್ಲಿ ನೀಡಲು ಕೋರಿದ್ದರು ಎಂಬುದು ಸಿಬಿಐ ತನಿಖೆಯ ವೇಳೆ ಪತ್ತೆ ಹಚ್ಚಲಾಗಿದೆ.
ಪೋರ್ಟ್‌ಬ್ಲೇರ್‌ಗೆ ನಿಯೋಜನೆಗೊಂಡಿದ್ದ ಚಂದ್ರ ಅವರು, ಅಲ್ಲಿಯೂ ಮತ್ತೊಬ್ಬ ಪೂರೈಕೆದಾರರ ಪ್ರತಿನಿಧಿಯಿಂದ ₹ 3 ಲಕ್ಷ ಲಂಚಕ್ಕೆ ಬೇಡಿಯಿಟ್ಟಿದ್ದರು ಎಂಬ ಆರೋಪವೂ ಕೇಳಿಬಂದಿದೆ.