ಕೋಲ್ಕತಾ: ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಾಹಿತ್ಯ ವಿಶೇಷ ಪ್ರಶಸ್ತಿ ನೀಡಿದ ನಿರ್ಧಾರವನ್ನು ವಿರೋಧಿಸಿ ಬಂಗಾಳಿ ಲೇಖಕಿ ಮತ್ತು ಜಾನಪದ ಸಂಸ್ಕೃತಿ ಸಂಶೋಧಕರೊಬ್ಬರು ಮಂಗಳವಾರ ಪಶ್ಚಿಮ ಬಂಗಾಳದ ಬಾಂಗ್ಲಾ ಅಕಾಡೆಮಿ ನೀಡಿದ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.
ರತ್ನಾ ರಶೀದ್ ಬ್ಯಾನರ್ಜಿ ಅವರು 2019 ರಲ್ಲಿ ಅಕಾಡೆಮಿಯಿಂದ ಗೌರವಿಸಲ್ಪಟ್ಟ ‘ಅನ್ನದ ಶಂಕರ್ ಸ್ಮಾರಕ ಸಮ್ಮಾನ್’ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.
ಈ ಸಂಬಂಧ ಶಿಕ್ಷಣ ಸಚಿವರೂ ಆಗಿರುವ ಅಕಾಡೆಮಿ ಅಧ್ಯಕ್ಷೆ ಬ್ರತ್ಯಾ ಬಸು ಅವರಿಗೆ ಪತ್ರ ಬರೆದಿರುವ ರತ್ನಾ ರಶೀದ್ ಬ್ಯಾನರ್ಜಿ ಅವರು, ರವೀಂದ್ರನಾಥ ಠಾಕೂರರ ಜನ್ಮದಿನದಂದು ಸಿಎಂಗೆ ಹೊಸ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡುವ ನಿರ್ಧಾರ ಘೋಷಿಸಿದ ಹಿನ್ನೆಲೆಯಲ್ಲಿ ಅಕಾಡೆಮಿ ಪ್ರಶಸ್ತಿ ತಮಗೆ ಮುಳ್ಳಿನ ಕಿರೀಟವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ಪ್ರಶಸ್ತಿಯನ್ನು ಹಿಂದಿರುಗಿಸುವ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ. ಸಿಎಂಗೆ ಸಾಹಿತ್ಯ ಪ್ರಶಸ್ತಿ ನೀಡುವ ಕ್ರಮದಿಂದ ಬರಹಗಾರರಾಗಿರುವ ನನಗೆ ಅವಮಾನವಾಗಿದೆ. ಇದು ಕೆಟ್ಟ ನಿದರ್ಶನವನ್ನು ತೋರಿಸುತ್ತದೆ. ಗೌರವಾನ್ವಿತ ಮುಖ್ಯಮಂತ್ರಿಯವರ ನಿರಂತರ ಸಾಹಿತ್ಯದ ಅನ್ವೇಷಣೆಯನ್ನು ಹೊಗಳಿರುವ ಅಕಾಡೆಮಿಯ ಹೇಳಿಕೆಯು ಸತ್ಯದ ಅಪಹಾಸ್ಯವಾಗಿದೆ ಎಂದು ರಶೀದ್ ಬ್ಯಾನರ್ಜಿ ಹೇಳಿದ್ದಾರೆ.
ಸೋಮವಾರ ಟ್ಯಾಗೋರ್ ಅವರ ಜನ್ಮದಿನವನ್ನು ಆಚರಿಸಲು ರಾಜ್ಯ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ 900ಕ್ಕೂ ಹೆಚ್ಚು ಕವನಗಳ ಸಂಕಲನ ‘ಕಬಿತಾ ಬಿಟನ್’ ಪುಸ್ತಕಕ್ಕೆ ಈ ವರ್ಷ ಪರಿಚಯಿಸಲಾದ ಪ್ರಶಸ್ತಿಯನ್ನು ಘೋಷಿಸಲಾಯಿತು. ಸಿಎಂ ಪರವಾಗಿ ಸಚಿವರಾದ ಬ್ರತ್ಯಾ ಬಸು ಪ್ರಶಸ್ತಿ ಸ್ವೀಕರಿಸಿದ್ದರು.
ಮೂರು ಅವಧಿಗೆ ರಾಜ್ಯವನ್ನು ಆಳಲು ಜನರಿಂದ ಸಿಕ್ಕಿರುವ ಭಾರಿ ಜನಾದೇಶದ ರಾಜಕೀಯ ಹೋರಾಟಕ್ಕಾಗಿ ನಾವು ಸಿಎಂ ಅವರನ್ನು ಮೆಚ್ಚುತ್ತೇವೆ ಮತ್ತು ಗೌರವಿಸುತ್ತೇವೆ. ನಾವು ಅವರಿಗೆ ಮತ ಹಾಕಿದ್ದೇವೆ. ಆದರೆ ಅವರು ರಾಜಕೀಯಕ್ಕೆ ಕೊಟ್ಟಿರುವ ಕೊಡುಗೆಯನ್ನು ನಾನು ಸಾಹಿತ್ಯಕ್ಕೆ ಸಮೀಕರಿಸಲು ಸಾಧ್ಯವಿಲ್ಲ. ಅಕಾಡೆಮಿ ಅಧ್ಯಕ್ಷೆ ಬ್ರತ್ಯಾ ಬಸು ಅವರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಘೋಷಿಸಿದ ನಂತರ ಮುಖ್ಯಮಂತ್ರಿಗಳು ಪ್ರಶಸ್ತಿಯನ್ನು ಸ್ವೀಕರಿಸದೆ ಪ್ರಬುದ್ಧತೆಯನ್ನು ತೋರಿಸಬಹುದಿತ್ತು ಎಂದು ಅವರು ಹೇಳಿದರು.
ಲೇಖಕರಾದ ರತ್ನಾ ರಶೀದ್ ಬ್ಯಾನರ್ಜಿ 30ಕ್ಕೂ ಹೆಚ್ಚು ಲೇಖನಗಳು ಮತ್ತು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಅವರು ಸಮಾಜದ ಅಂಚಿನಲ್ಲಿರುವ ವರ್ಗಗಳನ್ನು ಒಳಗೊಂಡಂತೆ ಜಾನಪದ ಸಂಸ್ಕೃತಿಯ ಕುರಿತು ಸಂಶೋಧನಾ ಕಾರ್ಯಗಳನ್ನು ಮಾಡಿದ್ದಾರೆ.
ಸಾಹಿತ್ಯ ಮತ್ತು ಸಮಾಜದ ಇತರ ಕ್ಷೇತ್ರಗಳ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವವರಿಗೆ ಬಹುಮಾನ ನೀಡಲು ಬಾಂಗ್ಲಾ ಅಕಾಡೆಮಿ ನಿರ್ಧರಿಸಿದೆ ಎಂದು ಸಚಿವರಾದ ಬ್ರತ್ಯಾ ಬಸು ಅವರು ಸೋಮವಾರ ಹೇಳಿದ್ದರು.
2020ರ ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದಲ್ಲಿ ಮುಖ್ಯಮಂತ್ರಿಯವರ ಪುಸ್ತಕ ‘ಕಬಿತಾ ಬಿಟಾನ್’ ಬಿಡುಗಡೆಯಾಗಿತ್ತು.