ಅಹ್ಮದಾಬಾದ್: ಗುಜರಾತ್ ನ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಟ್ವಿಟರ್ ನಲ್ಲಿ ತಮ್ಮ ವಿವರಗಳನ್ನು ಬದಲಾವಣೆ ಮಾಡಿರುವುದು ಕುತೂಹಲ ಮೂಡಿಸಿದೆ.
ಟ್ವಿಟರ್ ಪ್ರೊಫೈಲ್ ನಲ್ಲಿ ಕಾಂಗ್ರೆಸ್ ನಲ್ಲಿ ತಮಗೆ ನೀಡಲಾಗಿದ್ದ ಹುದ್ದೆಯ ವಿವರ, ಪಕ್ಷದ ಚುನಾವಣಾ ಚಿಹ್ನೆಯನ್ನು ತೆಗೆದುಹಾಕಿದ್ದು ಆತ ಕಾಂಗ್ರೆಸ್ ನ್ನು ತೊರೆಯಬಹುದು ಎಂಬ ಊಹಾಪೋಹಗಳಿಗೆ ಈಗ ಮತ್ತಷ್ಟು ಇಂಬು ದೊರೆತಿದೆ. ಗುಜರಾತ್ ನಲ್ಲಿ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ರಾಜ್ಯದ ಕಾಂಗ್ರೆಸ್ ನಾಯಕತ್ವ ಕಾರ್ಯನಿರ್ವಹಿಸುತ್ತಿರುವ ರೀತಿಯ ಬಗ್ಗೆ ಹಾರ್ದಿಕ್ ಪಟೇಲ್ ಕೆಲವೇ ದಿನಗಳ ಹಿಂದೆಯಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಗುಜರಾತ್ ನಲ್ಲಿ ಪಾಟೀದಾರ್ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲು ಆಗ್ರಹಿಸಿ ಹೋರಾಟದ ಮೂಲಕವೇ ಪ್ರಚಾರ ಪಡೆದುಕೊಂಡಿದ್ದ ಹಾರ್ದಿಕ್ ಪಟೇಲ್, ಹೊಸ ಟ್ವಿಟರ್ ಪ್ರೊಫೈಲ್ ನಲ್ಲಿ ತಮ್ಮನ್ನು ಹೆಮ್ಮೆಯ ಭಾರತೀಯ ಎಂದು ವಿವರಿಸಿಕೊಂಡಿದ್ದಾರೆ.
ಇದಕ್ಕೂ ಕೆಲವೇ ದಿನಗಳ ಹಿಂದೆ ತಮ್ಮನ್ನು ಹಿಂದೂವಾದಿ ನಾಯಕ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು ಈ ಬಳಿಕ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.