ನವದೆಹಲಿ: ರಾಂಚಿ ವಿಮಾನ ನಿಲ್ದಾಣದಲ್ಲಿ ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗುವನ್ನು ವಿಮಾನ ಹತ್ತುವುದನ್ನು ಇಂಡಿಗೋ ನಿರ್ಬಂಧಿಸಿದೆ. ಈ ಘಟನೆ ನಂತರ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆಯನ್ನು ಪ್ರಾರಂಭಿಸಿದ್ದು ವರದಿಯನ್ನು ಸಲ್ಲಿಸಲು ವಿಮಾನಯಾನ ಸಂಸ್ಥೆಯನ್ನು ಕೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಚೇತನ ಬಾಲಕನಿಗೆ ರಾಂಚಿ-ಹೈದರಾಬಾದ್ ವಿಮಾನ ಹತ್ತುವುದನ್ನು ನಿಷೇಧಿಸಲಾಗಿತ್ತು. ಹೀಗಾಗಿ ಬಾಲಕನ ಪೋಷಕರು ಸಹ ವಿಮಾನವನ್ನು ಹತ್ತದಿರಲು ನಿರ್ಧರಿಸಿದ್ದರು. ಈ ಬಗ್ಗೆ ಡಿಜಿಸಿಎ ಇಂಡಿಗೋದಿಂದ ವರದಿ ಕೇಳಿದೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅರುಣ್ ಕುಮಾರ್ ಹೇಳಿದರು. ಘಟನೆಯ ಕುರಿತು ಇಂಡಿಗೋವನ್ನು ಪ್ರಶ್ನಿಸಿದಾಗ, 'ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ವಿಶೇಷ ಚೇತನ ಮಗುವು ಭಯಭೀತರಾಗಿದ್ದರಿಂದ ತನ್ನ ಕುಟುಂಬದೊಂದಿಗೆ ಮೇ 7ರಂದು ವಿಮಾನವನ್ನು ಹತ್ತಲು ಸಾಧ್ಯವಾಗಲಿಲ್ಲ. ವಿಮಾನ ಸಿಬ್ಬಂದಿ ಕೊನೆಯ ಕ್ಷಣದವರೆಗೂ ಮಗು ಶಾಂತವಾಗುತ್ತದೆ ಎಂದು ಕಾದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದೆ.
ವಿಮಾನಯಾನ ಸಂಸ್ಥೆಯು ಕುಟುಂಬಕ್ಕೆ ಹೋಟೆಲ್ ವಾಸ್ತವ್ಯವನ್ನು ಒದಗಿಸಿಕೊಡಲಾಗಿತ್ತು. ಮರುದಿನ ಬೆಳಿಗ್ಗೆ ತಮ್ಮ ಗಮ್ಯಸ್ಥಾನಕ್ಕೆ ಪ್ರಯಾಣಿಸಿದರು ಎಂದು ಇಂಡಿಗೋ ಹೇಳಿದೆ.