ಹಲ್ದ್ವಾನಿ: ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರ ಸೊಸೆ ಮೊಕದ್ದಮೆ ದಾಖಲಿಸಿದ ಮೂರು ದಿನಗಳ ನಂತರ, ಬುಧವಾರದಂದು ನೀರಿನ ಟ್ಯಾಂಕ್ ಹತ್ತಿ, ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
59 ವರ್ಷದ ರಾಜೇಂದ್ರ ಬಹುಗುಣ ಅವರು ಹಲ್ದ್ವಾನಿಯಲ್ಲಿರುವ ತಮ್ಮ ಮನೆಯಿಂದ ತುರ್ತು ಸಂಖ್ಯೆ 112 ಗೆ ಕರೆ ಮಾಡಿ ತಮ್ಮ ಆತ್ಮಹತ್ಯಾ ಯೋಜನೆಯ ಬಗ್ಗೆ ಪೊಲೀಸರಿಗೆ ಮೊದಲು ತಿಳಿಸಿದ್ದರು. ಪೋಲೀಸರು ಅವನ ಮನೆಗೆ ಬಂದಾಗ ರಾಜೇಂದ್ರ ಬಹುಗುಣ ಆಗಲೇ ಟ್ಯಾಂಕ್ ಮೇಲೇರಿದ್ದರು. ಸ್ವತಃ ಗುಂಡು ಹಾರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಪೋಲೀಸರು ಧ್ವನಿವರ್ಧಕ ಬಳಸಿ ಮಾತನಾಡಲು ಪ್ರಯತ್ನಿಸಿದರು. ಆದರೆ ಅವರು ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪುನರುಚ್ಚರಿಸಿದರು. ಆದರೆ ಇದ್ದಕ್ಕಿದ್ದಂತೆ ಬಂದೂಕು ಎತ್ತಿಕೊಂಡು ಎದೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅವರ ಪುತ್ರ ಅಜಯ್ ಬಹುಗುಣ ಅವರ ದೂರಿನ ಮೇರೆಗೆ ಬಹುಗುಣ ಅವರ ಸೊಸೆ, ಅವರ ತಂದೆ ಮತ್ತು ನೆರೆಹೊರೆಯವರ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.
ಅವರ ಸೊಸೆಯ ದೂರಿನ ಮೇರೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ರಸ್ತೆಗಳ ಒಕ್ಕೂಟದ ನಾಯಕರಾಗಿದ್ದ ರಾಜೇಂದ್ರ ಬಹುಗುಣ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ಬಹುಗುಣ ಅವರು 2004-05ರಲ್ಲಿ ಎನ್‌ಡಿ ತಿವಾರಿ ಸರ್ಕಾರದಲ್ಲಿ ಸಚಿವರಾಗಿದ್ದರು.
ತಮ್ಮ ವಿರುದ್ಧದ ಆರೋಪದ ಬಗ್ಗೆ ಅವರು ತುಂಬಾ ಅಸಮಾಧಾನಗೊಂಡಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.