ಶ್ರೀನಗರ: ಬುದ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ ನೌಕರನ ಹತ್ಯೆಯ ತನಿಖೆಗೆ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸುವುದಾಗಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಶುಕ್ರವಾರ ಪ್ರಕಟಿಸಿದೆ.
ಬುದ್ಗಾಮ್ ಜಿಲ್ಲೆಯ ಚದೂರ ಎಂಬಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ರಾಹುಲ್ ಭಟ್ ಗಂಭೀರವಾಗಿ ಗಾಯಗೊಂಡು ಶ್ರೀನಗರದ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದರು.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಟ್ವೀಟ್ ಮಾಡಿ, ಭೀಕರ ಭಯೋತ್ಪಾದಕ ದಾಳಿಯ ಎಲ್ಲಾ ಆಯಾಮಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲು ನಿರ್ಧರಿಸಲಾಗಿದ್ದು ಮೃತ ರಾಹುಲ್ ಭಟ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗವನ್ನೂ ಘೋಷಿಸಿದರು. ಭಟ್ ಅವರ ಮಗಳ ಶಿಕ್ಷಣದ ಎಲ್ಲಾ ವೆಚ್ಚವನ್ನು ಆಡಳಿತವು ಭರಿಸಲಿದೆ ಎಂದು ಸಿನ್ಹಾ ಹೇಳಿದರು.
ರಾಹುಲ್ ಭಟ್ ಹತ್ಯೆ ನಂತರ, ಪ್ರಧಾನಿಯವರ ಉದ್ಯೋಗ ಪ್ಯಾಕೇಜ್‌ನ ಭಾಗವಾಗಿ ಕಣಿವೆಯಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸಿದರು. ಬುದ್ಗಾಮ್‌ನ ಶೇಖ್‌ಪುರದಲ್ಲಿ ಪ್ರತಿಭಟನಾನಿರತ ವಲಸೆ ಕಾರ್ಮಿಕರ ಮೇಲೆ ಪೊಲೀಸರು ಶುಕ್ರವಾರ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದು ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಭಟ್ ಹತ್ಯೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಮೆರವಣಿಗೆ ನಡೆಸುತ್ತಿದ್ದರು. ಏತನ್ಮಧ್ಯೆ, ಕಾಶ್ಮೀರಿ ಪಂಡಿತ್ ನೌಕರರ ಸಾಮೂಹಿಕ ರಾಜೀನಾಮೆ ವರದಿಗಳನ್ನು ಜಿಲ್ಲಾಡಳಿತ ನಿರಾಕರಿಸಿದೆ.