ರಾಮನಟ್ಟುಕರ: ನಿಮ್ಮ ಮಕ್ಕಳೇನಾದರೂ ಚೈನೀಸ್ ರಿಂಗ್ ಹಾಕಿಕೊಂಡಿದ್ದರೆ, ತಪ್ಪದೇ ಈ ಸ್ಟೋರಿ ಓದಿ. ಬೆರಳಿನಲ್ಲಿ ಚೈನೀಸ್ ರಿಂಗ್ ನಿಮ್ಮ ಮಕ್ಕಳ ಬೆರಳು ಕತ್ತರಿಸುವ ಹಂತಕ್ಕೂ ಹೋಗಬಹುದು. ಕೇರಳದಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಇಬ್ಬರು ಮಕ್ಕಳು ತಮ್ಮ ಪಾಲಕರೊಂದಿಗೆ ಮೀನಚಂಡ ಅಗ್ನಿಶಾಮಕ ಠಾಣೆಗೆ ದೌಡಾಯಿಸಿ ತಮ್ಮ ಕೈಬೆರಳಿನಲ್ಲಿದ್ದ ಚೈನೀಸ್ ರಿಂಗ್ ಅನ್ನು ತುಂಬಾ ಕಷ್ಟಪಟ್ಟು ತೆಗೆಸಿದ್ದಾರೆ. ಈ ರೀತಿಯ ಹಲವು ಘಟನೆಗಳು ಕೇರಳದಲ್ಲಿ ಬೆಳಕಿಗೆ ಬರುತ್ತಿದ್ದು, ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.
ವಜಾಯುರ್ ಮೂಲದ ಸುಧಾ ಎಂಬುವರ 6 ವರ್ಷದ ಮಗಳು ಹಿವಾನಿ ಮತ್ತು ಕೊಂಡೊಟ್ಟಿ ನಿವಾಸಿ ಮುಸ್ತಾಫಾ ಅವರ ಪುತ್ರ 14 ವರ್ಷದ ಮೊಹಮ್ಮದ್ ಸನ್ಫಾನ್ ಅವರ ಕೈಯಲ್ಲಿದ್ದ ಚೈನೀಸ್ ಉಂಗುರವನ್ನು ಮೀಚಂಡ ಅಗ್ನಿಶಾಮಕ ಸಿಬ್ಬಂದಿ ತೆಗೆದಿದ್ದಾರೆ. ಸುಮಾರು ದಿನಗಳವರೆಗೆ ಚೈನೀಸ್ ರಿಂಗ್ ಧರಿಸಿರುವ ಮಕ್ಕಳ ಮೇಲೆ ಎಚ್ಚರಿಕೆ ವಹಿಸಿ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಚೈನೀಸ್ ರಿಂಗ್ ಅನ್ನು ಎಣ್ಣೆ ಅಥವಾ ಸೋಪು ನೀರಿನಲ್ಲಿ ಪ್ರಯತ್ನ ಮಾಡಿದರು ತೆಗೆಯಲು ಸಾಧ್ಯವಾಗುತ್ತಿಲ್ಲ. ಅಕ್ಕಸಾಲಿಗ ಮತ್ತು ಆಸ್ಪತ್ರೆಗಳಿಂದ ಚೈನೀಸ್ ರಿಂಗ್ಗಳನ್ನು ಕಳೆಯಲು ಸಾಧ್ಯವಾಗದಿದ್ದಾಗ ಕೊನೆಯ ಪ್ರಯತ್ನ ಎಂಬಂತೆ ಅನೇಕ ಪಾಲಕರು ತಮ್ಮ ಮಕ್ಕಳನ್ನು ಅಗ್ನಿಶಾಮಕ ಠಾಣೆಯತ್ತ ಕರೆತರುತ್ತಿದ್ದಾರೆ.
ರಿಂಗ್ ಕೈಯಲ್ಲೇ ಇದ್ದರೆ, ಬೆರಳು ಊದಿಕೊಂಡು ರಕ್ಷಣೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಚೈನೀಸ್ ರಿಂಗ್ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಮೀನಚಂಡ ಅಗ್ನಿಶಾಮಕ ಠಾಣೆಯು ಉಂಗುರಗಳನ್ನು ಕತ್ತರಿಸಲು ಹೊಸ ಯಂತ್ರವನ್ನೇ ಖರೀದಿಸಿದೆ.