ವಾರಣಾಸಿ: ನ್ಯಾಯಾಲಯ ನೇಮಿತ ಸಮೀಕ್ಷಾ ಆಯೋಗದಿಂದ ತೆಗೆಯಲಾದ ಜ್ಞಾನವಾಪಿ ಮಸೀದಿಯ ಫೋಟೋಗಳು ಹಾಗೂ ವೀಡಿಯೋಗಳ ಪ್ರತಿಗಳನ್ನು ಪಡೆದುಕೊಳ್ಳುವಂತೆ ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ವಿವಾದದ ಎರಡೂ ಕಡೆಗಳಿಗೆ ವಾರಣಾಸಿ ನ್ಯಾಯಾಲಯ ಸೋಮವಾರ ಸೂಚಿಸಿದೆ, ಸಮೀಕ್ಷೆಯ ವರದಿ, ವೀಡಿಯೋಗಳು ಮತ್ತು ಚಿತ್ರಗಳನ್ನು ನ್ಯಾಯಾಲಯಕ್ಕೆ ಮೇ 19ರಂದು ಸಲ್ಲಿಸಲಾಗಿತ್ತು.
ಸಮೀಕ್ಷೆ ಸಂದರ್ಭ ತೆಗೆಯಲಾದ ವೀಡಿಯೋಗಳು ಮತ್ತು ಫೋಟೋಗಳನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಲ್ಲಿಸಲು ಮಾತ್ರ ಬಳಸಬಹುದು ಹಾಗೂ ನ್ಯಾಯಾಲಯದ ಅನುಮತಿಯಿಲ್ಲದೆ ಅವುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಕುರಿತಂತೆ ಎರಡೂ ಕಡೆಗಳು ಲಿಖಿತ ಹೇಳಿಕೆ ನೀಡಬೇಕು ಎಂದೂ ತಿಳಿಸಲಾಗಿತ್ತು.
ಮಸೀದಿಯೊಳಗಿನ ಫೋಟೋಗಳು ಮತ್ತು ವೀಡಿಯೋಗಳನ್ನು ಒದಗಿಸಬೇಕೆಂದು ಕೋರಿ ಈ ಪ್ರಕರಣದಲ್ಲಿ ಮೊದಲು ಅರ್ಜಿ ಸಲ್ಲಿಸಿದ್ದ ಐವರು ಮಹಿಳೆಯರು ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರು. ಆದರೆ ಮಸೀದಿ ಸಮಿತಿ ಮಾತ್ರ ಫೋಟೋ, ವೀಡಿಯೋಗಳನ್ನು ಒದಗಿಸುವುದಕ್ಕೆ ವಿರೋಧ ಸೂಚಿಸಿತ್ತು.
ಲಿಖಿತ ಭರವಸೆ ನೀಡಿದ ನಂತರ ಫೋಟೋಗಳು ಮತ್ತು ವೀಡಿಯೋಗಳನ್ನು ಅರ್ಜಿದಾರರಿಗೆ ಸೋಮವಾರವೇ ನೀಡಲಾಗಿದ್ದರೂ ಕೆಲವೇ ಸಮಯದಲ್ಲಿ ಅವುಗಳು ಸೋರಿಕೆಯಾಗಿ ವೈರಲ್ ಆಗಿ ಹಲವು ಸುದ್ದಿ ತಾಣಗಳೂ ಅವುಗಳನ್ನು ಪ್ರಸಾರ ಮಾಡಿದ್ದವು
ಈ ಮಸೀದಿಯು ಒಂದು ಕಾಲದಲ್ಲಿ ಹಿಂದು ದೇವಳವಾಗಿತ್ತು ಹಾಗೂ ಮುಘಲ್ ಸಾಮ್ರಾಟ ಔರಂಗಜೇಬ್ ಆ ದೇವಳವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಿದ್ದ ಎಂದು ಆರೋಪಿಸಿದ್ದ ಅರ್ಜಿದಾರರು ಮಸೀದಿಯ ಪಶ್ಚಿಮ ಗೋಡೆಯ ಹಿಂದಿನ ಸ್ಥಳದಲ್ಲಿರುವ ಹಿಂದು ದೇವಾಲಯದಲ್ಲಿ ಒಂದು ವರ್ಷ ಪೂಜೆ ಸಲ್ಲಿಸುವ ಅವಕಾಶವನ್ನೂ ಕೋರಿದ್ದರು.