ನವದೆಹಲಿ : ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಮೇ ತಿಂಗಳಿನಿಂದ ಸೆಪ್ಟಂಬರ್‌ವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾಗಬೇಕಿರುವ ಗೋದಿಯ ಪ್ರಮಾಣವನ್ನು ಕೇಂದ್ರ ಸರಕಾರವು ಬುಧವಾರ ಕಡಿತಗೊಳಿಸಿದೆ.
ಗೋದಿಯ ಕಡಿಮೆ ಮಾಡಲಾದ ಕೋಟಾವನ್ನು ಅಕ್ಕಿಯನ್ನು ವಿತರಿಸುವ ಮೂಲಕ ಸರಿದೂಗಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ತಿಳಿಸಿದೆ.
ಆಹಾರ ಭದ್ರತೆ ಕಲ್ಯಾಣ ಯೋಜನೆಯಡಿ ಬಿಹಾರ,ಕೇರಳ ಮತ್ತು ಉತ್ತರ ಪ್ರದೇಶಗಳಿಗೆ ಗೋದಿಯನ್ನು ವಿತರಿಸಲಾಗುವುದಿಲ್ಲ. ದಿಲ್ಲಿ, ಗುಜರಾತ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ,ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಎಂಟು ರಾಜ್ಯಗಳ ಕೋಟಾವನ್ನು ಕಡಿಮೆ ಮಾಡಲಾಗಿದೆ.
ಸಚಿವಾಲಯವು ಪ್ರಸಕ್ತ ವರ್ಷಕ್ಕೆ ಗೋದಿ ಸಂಗ್ರಹಣೆಯ ತನ್ನ ಅಂದಾಜನ್ನು ಹಿಂದಿನ 439.92 ಲ.ಮೆ.ಟನ್‌ಗಳಿಂದ 192.12 ಲ.ಮೆ.ಟನ್‌ಗಳಿಗೆ ತಗ್ಗಿಸಿದ ಬಳಿಕ ಹಂಚಿಕೆ ಪ್ರಮಾಣವನ್ನು ಪರಿಷ್ಕರಿಸಲಾಗಿದೆ.
ಪರಿಷ್ಕರಣೆಯ ಬಳಿಕ ಕಲ್ಯಾಣ ಯೋಜನೆಯಡಿ ಗೋದಿ ಹಂಚಿಕೆ ಪ್ರಮಾಣವು 18.50 ಲ.ಮೆ.ಟ.ಗಳಿಂದ 7.23 ಲ.ಮೆ.ಟ.ಗೆ ಇಳಿಯಲಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 80 ಕೋ.ಗೂ ಅಧಿಕ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಆರಂಭಿಸಲಾಗಿತ್ತು. ಯೋಜನೆಯಡಿ ಕೇಂದ್ರ ಸರಕಾರವು ಪ್ರತಿ ವ್ಯಕ್ತಿಗೆ ಮಾಸಿಕ ಐದು ಕೆ.ಜಿ.ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸುತ್ತಿದೆ.
ಹೆಚ್ಚುವರಿಯಾಗಿ ಸುಮಾರು 55 ಲ.ಮೆ.ಟ.ಅಕ್ಕಿಯನ್ನು ಹಂಚಿಕೆ ಮಾಡಲಾಗುವುದು ಮತ್ತು ಅಷ್ಟೇ ಪ್ರಮಾಣದ ಗೋದಿಯನ್ನು ಉಳಿಸಲಾಗುವುದು ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವರ್ಷ ದೇಶದಲ್ಲಿ ಗೋದಿಯ ಉತ್ಪಾದನೆ 1,066.80 ಲ.ಮೆ.ಟ. ಆಗಲಿದೆ ಎಂದು ಅಂದಾಜಿಸಲಾಗಿದೆ. ಇದು 1,130.80 ಲ.ಮೆ.ಟ.ಗಳ ಹಿಂದಿನ ಅಂದಾಜಿಗಿಂತ ಕಡಿಮೆಯಾಗಿದೆ ಎಂದು ಪಾಂಡೆ ತಿಳಿಸಿದರು.
ಮಧ್ಯಪ್ರದೇಶ,ಗುಜರಾತ,ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿಯ ಹೆಚ್ಚಿನ ರೈತರು ಸರಕಾರವು ಗೋದಿಯನ್ನು ಖರೀದಿಸುವ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರಗಳಲ್ಲಿ ಮುಕ್ತ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಗೋದಿಯ ಕಡಿಮೆ ಸಂಗ್ರಹಣೆಗೆ ಕಾರಣವಾಗಿದೆ ಎಂದು ತಿಳಿಸಿರುವ ಸಚಿವಾಲಯವು, ಪಂಜಾಬ,ಹರ್ಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಬೇಸಿಗೆ ಬೇಗನೆ ಆರಂಭವಾಗಿರುವುದು ಮತ್ತು ಧಾನ್ಯಗಳ ಸುಕ್ಕುಗಟ್ಟುವಿಕೆಯಿಂದ ಉತ್ಪಾದನೆಯು ಕಡಿಮೆಯಾಗಿದೆ. ಅಲ್ಲದೆ ಕೆಲವು ತಿಂಗಳುಗಳ ಬಳಿಕ ಹೆಚ್ಚಿನ ಬೆಲೆಗಳಲ್ಲಿ ಮಾರಾಟಮಾಡಲು ರೈತರು ಮತ್ತು ವ್ಯಾಪಾರಿಗಳು ಕೆಲ ಪ್ರಮಾಣದ ಗೋದಿಯನ್ನು ದಾಸ್ತಾನಿಟ್ಟುಕೊಂಡಿದ್ದಾರೆ ಎಂದು ಹೇಳಿದೆ.
ಈ ನಡುವೆ ಗೋದಿಯ ರಫ್ತಿನ ಮೇಲೆ ಮಿತಿಯನ್ನು ಹೇರಲು ಸರಕಾರವು ನಿರಾಕರಿಸಿದೆ.