ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನನ್ನ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳವನ್ನು ಕಾಞಂಗಾಡ್ ಅಲಾಮಿಪಲ್ಲಿಯಲ್ಲಿ ಮೇ 3ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಇ ಚಂದ್ರಶೇಖರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 4 ರಂದು ಸಂಜೆ 5 ಗಂಟೆಗೆ ಮೇಳದ ಔಪಚಾರಿಕ ಉದ್ಘಾಟನೆಯನ್ನು ಬಂದರು, ವಸ್ತುಸಂಗ್ರಹಾಲಯ, ಪುರಾತತ್ವ ಖಾತೆ ಸಚಿವರಾದ ಅಹಮದ್ ದೇವರಕೋವಿಲ್ ನೆರವೇರಿಸುವರು. ನಾವೂ ಕೃಷಿಯೆಡೆಗೆ ಕಾರ್ಯಕ್ರಮದನ್ವಯ ನಡೆಯಲಿರುವ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ತರಕಾರಿ ಸಸಿಗಳನ್ನು ವಿತರಿಸುವರು. ಶಾಸಕ ಇ ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ, ಜಿಲ್ಲೆಯ ಶಾಸಕರು, ಸ್ಥಳೀಯಾಡಳಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಜಿಲ್ಲಾಧಿಕಾರಿ. ಜಿಲ್ಲಾ ಮಟ್ಟದ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.