ಬದಿಯಡ್ಕ: ವ್ಯಕ್ತಿತ್ವ ವಿಕಾಸದಲ್ಲಿ ತನ್ನದೇ ಪಾತ್ರ ನಿರ್ವಹಿಸುವ ಯಕ್ಷಗಾನ ಇಂದು ಬಹುಜನರಿಂದ ಸ್ವೀಕರಿಸಲ್ಪಟ್ಟು ವಿಸ್ತರಿಸಲ್ಪಟ್ಟಿದೆ. ಪಾರಂಪರಿಕತೆಗೆ ಧಕ್ಕೆಯಾಗದಂತೆ ಶುದ್ದಭಾಷಾ ಪ್ರಯೋಗಗಳೊಂದಿಗೆ ಸಂಸ್ಕøತಿಕ ಸಂವರ್ಧನೆಗೆ ಯಕ್ಷಗಾನ ಮಹತ್ತರ ಕೊಡುಗೆ ನೀಡುತ್ತಿದ್ದು, ಶ್ರೀಕ್ಷೇತ್ರ ಕೊಲ್ಲಂಗಾನ ಗಡಿನಾಡು ಕಾಸರಗೋಡಿನಲ್ಲಿ ಸುಧೀರ್ಘ ಅವಧಿಯಿಂದ ಮೇಳ ಮುನ್ನಡೆಸುತ್ತಾ ಬಂದಿರುವುದು ಗುರುತಿಸಬಹುದಾದುದು ಎಂದು ಯಕ್ಷಗಾನ ಗುರು ಜಯರಾಮ ಪಾಟಾಳಿ ಪಡುಮಲೆ ತಿಳಿಸಿದರು.
ಕೊಲ್ಲಂಗಾನದ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 24ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟದ ಭಾಗವಾಗಿ ಗುರುವಾರ ಶ್ರೀಕ್ಷೇತ್ರ ಕೊಲ್ಲಂಗಾನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿವೃತ್ತ ಪೋಲೀಸ್ ಅಧಿಕಾರಿ ಈಶ್ವರ ಭಟ್ ಮಂಡೆಕೋಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಪೌರಾಣಿಕ ಕಥಾನಕಗಳ ಸಂದೇಶಗಳನ್ನು ಜನಸಾಮಾನ್ಯರಿಗೆ ತಲಪಿಸುವಲ್ಲಿ ಯಕ್ಷಕಲೆಯ ಕೊಡುಗೆ ಸಾಂಸ್ಕøತಿಕವಾಗಿ ನಮ್ಮನ್ನು ಮುನ್ನಡೆಸಿದೆ ಎಂದರು.
ಸಾಮಾಜಿಕ ಕಾರ್ಯಕರ್ತರಾದ ಮಹೇಶ್ ವಳಕ್ಕುಂಜ, ಶಾಮಪ್ರಸಾದ್ ಮಾನ್ಯ, ಮಾನ್ಯ ಶ್ರೀಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಸಂತೋಷ್ ಕುಮಾರ್ ಎಸ್.ಉಪಸ್ಥಿತರಿದ್ದು ಶುಭಹಾರೈಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ನಿರೂಪಿಸಿದರು. ಸುಮನ್ ರಾಜ್ ನೀಲಂಗಳ ವಂದಿಸಿದರು. ತಂತ್ರಿ ಗಣಾಧಿರಾಜ ಉಪಾಧ್ಯಾಯ, ರವಿಶಂಕರ ಶೆಟ್ಟಿ ಕೊಲ್ಲಂಗಾನ ಮೊದಲಾದವರು ಸಹಕರಿಸಿದರು. ಬಳಿಕ ಯಕ್ಷಗಾನ ಮೇಳ ಹಾಗೂ ಅತಿಥಿ ಕಲಾವಿದರಿಂದ ಕಂಜಾಕ್ಷಿ ಕಲ್ಯಾಣ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.