ಕೊಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಶ್ರೀಲಂಕಾದಲ್ಲಿ ಅಲ್ಲಿನ ಅಧ್ಯಕ್ಷ ಗೊಟಬಯ ರಾಜಪಕ್ಸ ಮೇ.06 ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
5 ವಾರಗಳಲ್ಲಿ ಇದು ಎರಡನೇ ಬಾರಿಗೆ ಘೋಷಣೆಯಾಗುತ್ತಿರುವ ತುರ್ತು ಪರಿಸ್ಥಿತಿಯಾಗಿದೆ. ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ಹಿನ್ನೆಲೆಯಲ್ಲಿ ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.
ಅಧ್ಯಕ್ಷರ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕ ಸುವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ತಾವು ಕಠಿಣ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಲಂಕಾದಲ್ಲಿ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ರಾಜಪಕ್ಸ ನೇತೃತ್ವದ ಸರ್ಕಾರದ ವಿರುದ್ಧ ಜನ ದಂಗೆ ಎದ್ದಿರುವ ಪರಿಣಾಮ ಲಂಕಾದಲ್ಲಿ ಅಸ್ಥಿರತೆ ಉಂಟಾಗಿದೆ.
ಇದಕ್ಕೂ ಮುನ್ನ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ಸಂಸತ್ ನತ್ತ ಪ್ರತಿಭಟನಾ ಮೆರವಣಿಗೆ ಕೊಂಡೊಯ್ಯಲು ಯತ್ನಿಸಿದ ವಿದ್ಯಾರ್ಥಿಗಳನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ.
ಈಗ ತುರ್ತುಪರಿಸ್ಥಿತಿ ಹೇರಿಕೆ ಮಾಡಿರುವುದರಿಂದ ಸೇನೆಗೆ ಶಂಕಿತರನ್ನು ಬಂಧಿಸಿ ದೀರ್ಘಾವಧಿಯವರೆಗೂ ನ್ಯಾಯಾಂಗದ ಮೇಲ್ವಿಚಾರಣೆ ಇಲ್ಲದೇ ಬಂಧನದಲ್ಲಿಡುವುದಕ್ಕೆ ಸಾಧ್ಯವಾಗಲಿದೆ.
ಅಗತ್ಯ ಸೇವೆಗಳು ಹಾಗೂ ಸುವ್ಯವಸ್ಥೆಗಳ ನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳುವ ದೃಷ್ಟಿಯಿಂದ ಅಧ್ಯಕ್ಷರು ತಮ್ಮ ಅಧಿಕಾರ ಬಳಸಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಶುಕ್ರವಾರ ರಾತ್ರಿಯಿಂದಲೇ ಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ಬರಲಿದೆ ಎಂದು ರಾಜಪಕ್ಸ ಅವರ ವಕ್ತಾರರು ತಿಳಿಸಿದ್ದಾರೆ.