ಕೊಲೊಂಬೊ: ಹಿಂಸಾಚಾರ ಮತ್ತು ಉದ್ವಿಗ್ನ ಸ್ಥಿತಿಯಲ್ಲಿರುವ ಕೊಲೊಂಬೊಗೆ ಭಾರತ ತನ್ನ ಸೇನಾಪಡೆಯನ್ನು ಸಹಾಯಕ್ಕೆ ಕಳುಹಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಶ್ರೀಲಂಕಾದ ಭಾರತ ಹೈಕಮಿಷನ್ ತಳ್ಳಿಹಾಕಿದೆ. ಇದೇ ಸಂದರ್ಭದಲ್ಲಿ ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಪುನಶ್ಚೇತನಕ್ಕೆ ಭಾರತ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ಕೂಡ ಹೇಳಿದೆ.
ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದ ರಾಜಪಕ್ಸ ಮತ್ತು ಅವರ ಕುಟುಂಬ ಸದಸ್ಯರು ಭಾರತಕ್ಕೆ ಪಲಾಯನವಾಗಿ ಅಶ್ರಯ ಪಡೆದಿದ್ದಾರೆ ಎಂದು ಸ್ಥಳೀಯ ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ನಕಲಿ ಎಂದು ಸಾರಾಸಗಟಾಗಿ ಭಾರತ ಹೈ ಕಮಿಷನ್ ತಳ್ಳಿಹಾಕಿದೆ.
ಮಹಿಂದ ರಾಜಪಕ್ಸ ಅವರ ರಾಜೀನಾಮೆ ನಂತರ ಎಲ್ಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಕೊಲೊಂಬೊದ ಟೆಂಪಲ್ ಟ್ರೀಸ್ ನಲ್ಲಿರುವ ತಮ್ಮ ಅಧಿಕೃತ ನಿವಾಸ ಮತ್ತು ಕಚೇರಿಯಿಂದ ಮಹಿಂದ ಬಿಟ್ಟುಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಸೋಮವಾರ ನಂತರದ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಭಾರತ, ದ್ವೀಪರಾಷ್ಟ್ರದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಪುನಶ್ಚೇತನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದೆ. ಭಾರತವು ತನ್ನ ಸೈನ್ಯವನ್ನು ಶ್ರೀಲಂಕಾಕ್ಕೆ ಕಳುಹಿಸುವ ಕುರಿತು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಊಹಾಪೋಹದ ವರದಿಗಳನ್ನು ಹೈಕಮಿಷನ್ ಸ್ಪಷ್ಟವಾಗಿ ನಿರಾಕರಿಸುತ್ತದೆ. ಈ ವರದಿಗಳು ಭಾರತಕ್ಕೆ ಸರ್ಕಾರಕ್ಕೆ ಸಂಬಂಧಿಸಿಲ್ಲ ಎಂದು ಹೈಕಮಿಷನ್ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದೆ.