ಇಸ್ಲಾಮಾಬಾದ್: ಹೊಸ ಚುನಾವಣೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಆರ್ಥಿಕ ವ್ಯವಹಾರಗಳ ಸಚಿವ ಒಮರ್ ಅಯೂಬ್ ಖಾನ್ ಅವರ ದೇಹ ಮತ್ತು ತಲೆಯ ಮೇಲೆ ಗಾಯಗಳಾಗಿವೆ.
ಏಪ್ರಿಲ್‌ನಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಪದಚ್ಯುತಗೊಳಿಸಿದ ಇಮ್ರಾನ್ ಖಾನ್ ಅವರು ಲಾಂಗ್ ಮಾರ್ಚ್' ಅಥವಾ ಆಂದೋಲನಕ್ಕೆ ಕರೆ ನೀಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. ಇಮ್ರಾನ್ ಖಾನ್ ಸರ್ಕಾರದಲ್ಲಿ ಸಚಿವರಾಗಿದ್ದ ಒಮರ್ ಅಯೂಬ್ ಖಾನ್ ಅವರು ಪಂಜಾಬ್ ಜಿಲ್ಲೆಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಇಸ್ಲಾಮಾಬಾದ್‌ನ ಡಿ-ಚೌಕ್ ನಲ್ಲಿ ಹೊಸ ಚುನಾವಣೆಗೆ ಒತ್ತಾಯಿಸಲು 'ಶಾಂತಿಯುತ' ಪ್ರತಿಭಟನಾ ರ್ಯಾಲಿ ಕೈಗೊಳ್ಳುವಂತೆ ಖಾನ್ ತಮ್ಮ ಬೆಂಬಲಿಗರನ್ನು ಒತ್ತಾಯಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ರ್ಯಾಲಿಗೆ ಅನುಮತಿ ನೀಡುವಂತೆ ಮತ್ತು ಕ್ರಿಕೆಟಿಗ-ರಾಜಕಾರಣಿಯನ್ನು ಬಂಧಿಸದಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ನಂತರ ಪ್ರತಿಭಟನೆಗೆ ಕರೆ ನೀಡಿದರು.
ಟ್ವಿಟರ್ ನಲ್ಲಿ ಒಮರ್ ಅಯೂಬ್ ಖಾನ್, ನಿಮಗೆ ಬೇಕಾದುದನ್ನು ಮಾಡಿ, ಆದರೆ ನೀವು ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾವು ಬುರ್ಹಾನ್ ಸೇತುವೆಯನ್ನು ತೆರವುಗೊಳಿಸುತ್ತಿದ್ದಾಗ ಪಂಜಾಬ್ ಪೊಲೀಸರು ನಮ್ಮ ಮೇಲೆ ಅಶ್ರುವಾಯು ಸಿಂಪಡಿಸಿದರು. ನಮ್ಮ ಮೇಲೆ ಕಲ್ಲು ತೂರಾಟ, ಲಾಠಿ ಪ್ರಹಾರ ನಡೆಸಿದರು. ಲಾಠಿ ಚಾರ್ಜ್ ವೇಳೆ ನಾನು ಗಾಯಗೊಂಡಿದ್ದೇನೆ ಎಂದು ಗಾಯಗೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.