ತಿರುವನಂತಪುರಂ: ಮಾಜಿ ಶಾಸಕ ಪಿಸಿ ಜಾರ್ಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೋರ್ಟ್ ಅಸಿ.ಕಮಿಷನರ ನಿರ್ದೇಶನದ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಎರಟ್ಟುಪೆಟ್ಟಾದಲ್ಲಿರುವ ಅವರ ಮನೆಯಲ್ಲಿ ಬಂಧಿಸಲಾಯಿತು. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಪಿಸಿ ಜಾರ್ಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಅನಂತಪುರಿ ಹಿಂದೂ ಮಹಾಸಮ್ಮೇಳನದಲ್ಲಿ ಪಿಸಿ ಜಾರ್ಜ್ ನೀಡಿದ ದ್ವೇಷಪೂರಿತ ಭಾಷಣದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಹಿಂದೂ ಕಾಂಗ್ರೆಸ್ ನಲ್ಲಿ ಮಾಡಿದ ಭಾಷಣದ ಆಯ್ದ ಭಾಗಗಳನ್ನು ಉಲ್ಲೇಖಿಸಿ ಯೂತ್ ಲೀಗ್ ದೂರು ದಾಖಲಿಸಿತ್ತು. ಪಿಸಿ ಜಾರ್ಜ್ ಅವರು ಹರಿದ್ವಾರ ಮಾದರಿ ಭಾಷಣ ಮಾಡಿರುವುದು ಯೂತ್ ಲೀಗ್ ಪತ್ತೆಹಚ್ಚಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಜ್ ಹೇಳಿದ್ದರು. ಪಿಸಿ ಜಾರ್ಜ್ ವಿರುದ್ಧ ಲೀಗ್ ನಾಯಕ ಕೆಪಿಎ ಮಜೀದ್ ಕೂಡ ಹರಿಹಾಯ್ದಿದ್ದರು.
ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರು ಸೇರಿ ಜಾತ್ಯಾತೀತ ಕೇರಳ ನಿರ್ಮಿಸಿದ್ದು, ಎಳನೀರು ಬೆರೆಸಿ ಮೀನು ಹಿಡಿಯುವ ಯತ್ನ ಪಿ.ಸಿ.ಜಾರ್ಜ್ ಅವರದ್ದು ಎಂದು ಕೆಪಿಎ ಮಜೀದ್ ಅವರು ಟೀಕಿಸಿರುವರು. ಜಾರ್ಜ್ ಕೋಮುದ್ವೇಷ ಕೆರಳಿಸಲು ಯತ್ನಿಸುತ್ತಿದ್ದು, ಪೂರ್ವಯೋಜಿತ ಹೇಳಿಕೆ ನೀಡಿದ್ದು, ಜಾರ್ಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಆಗ್ರಹಿಸಿದ್ದರು.
ದೂರುಗಳ ಹಿನ್ನೆಲೆಯಲ್ಲಿ ಡಿಜಿಪಿ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಿಪ್ಪು ಸಂಪೂರ್ಣ ಕೋಮುವಾದಿ, ಆತ ಮುಸ್ಲಿಮೇತರರನ್ನು ಹತ್ಯೆ ಮಾಡಿದ್ದ. ಕೇರಳದಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂಬುದು ಸೇರಿದಂತೆ ಸತ್ಯಾಂಶಗಳನ್ನು ಪಿಸಿ ಜಾರ್ಜ್ ತೆರೆದಿಟ್ಟರು. ತನ್ನ ಹೇಳಿಕೆಗೆ ಯಾರಾದರೂ ಮರಣದಂಡನೆ ವಿಧಿಸುವರೇ ಎಂದು ನೋಡಬೇಕೆಂದು ಜಾರ್ಜ್ ಸವಾಲು ಹಾಕಿದ್ದರು.