ನವದೆಹಲಿ: ಭಾರತದಲ್ಲಿ ಬಿಸಿಲಿನ ತಾಪಮಾನ ತೀವ್ರಗೊಳ್ಳುತ್ತಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸುವ ಸಂಬಂಧ ಮಹತ್ವದ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಉಷ್ಣಹವೆಯ ಪರಿಣಾಮ ಉಂಟಾಗಬಹುದಾದ ಜೀವಹಾನಿಯನ್ನು ತಡೆಗಟ್ಟಲು ಹಾಗೂ ಬೆಂಕಿ ಅವಘಡಗಳನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾರ್ಚ್-ಮೇ 2022 ರ ಅವಧಿಯಲ್ಲಿ ದೇಶಾದ್ಯಂತ ತೀವ್ರವಾದ ತಾಪಮಾನದ ಬಗ್ಗೆ ಮಾಹಿತಿ ನೀಡಿದೆ ಎಂದು ಪ್ರಧಾನಿಗಳ ಕಾರ್ಯಾಲಯ ತಿಳಿಸಿದೆ.
ತೀವ್ರ ಉಷ್ಣಾಂಶದಿಂದ ಉಂಟಾಗಬಹುದಾದ ಸಾವು, ಬೆಂಕಿ ಅವಘಡಗಳನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವಂತೆ ಪ್ರಧಾನಿ ಹೇಳಿದ್ದಾರೆ.
ಒಂದು ವೇಳೆ ಇಂತಹ ಘಟನೆಗಳು ನಡೆದರೆ ಅವುಗಳಿಗೆ ಸಾಧ್ಯವಾದಷ್ಟೂ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ ನೀಡಿದ್ದಾರೆ.
ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಮಿತ ಅಗ್ನಿ ಸುರಕ್ಷತೆ ಲೆಕ್ಕಪರಿಶೋಧನೆ ನಡೆಸುವಂತೆಯೂ ಪ್ರಧಾನಿ ಸಭೆಯಲ್ಲಿ ನಿರ್ದೇಶನ ನೀಡಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಅರಣ್ಯ ಸಿಬ್ಬಂದಿಗಳ ಸಾಮರ್ಥ್ಯಗಳನ್ನು ಹೆಚ್ಚಿಸುವುದು, ಸಂಭಾವ್ಯ ಅಗ್ನಿ ದುರಂತಗಳನ್ನು ಪತ್ತೆ ಮಾಡುವುದು, ಅಗ್ನಿ ಅವಘಡಗಳನ್ನು ತಹಬದಿಗೆ ತರುವುದೂ ಸೇರಿದಂತೆ ಹಲವು ಸೂಚನೆಗಳನ್ನು ಪ್ರಧಾನಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.
ಇದೇ ವೇಳೆ ಮುಂಬರುವ ಮುಂಗಾರು ಆಗ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ನಡೆಸಿರುವ ತಯಾರಿಗಳ ಬಗ್ಗೆಯೂ ಪ್ರಧಾನಿ ಈ ಸಭೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.