ಕಾಸರಗೋಡು: ದೈಹಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಮತ್ತು ಮಕ್ಕಳಿಗೆ ನೆರವು ಮತ್ತು ಬೆಂಬಲ ನೀಡುವ ಯೋಜನೆಯಾದ ಒನ್ ಸ್ಟಾಪ್ ಸೆಂಟರ್‍ನ ನೂತನ ಕಟ್ಟಡ ಆಗಸ್ಟ್ 15 ರಂದು ಉದ್ಘಾಟನೆಗೊಳ್ಳಲಿದೆ. ಕಾಸರಗೋಡು ಅಣಂಗೂರಿನಲ್ಲಿ ಎರಡು ಅಂತಸ್ತಿನ ಕಟ್ಟಡದ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷತೆ ವಹಿಸಿ ಮಹಿಳಾ ರಕ್ಷಣಾ ಕಛೇರಿಯ ವಿವಿಧ ಚಟುವಟಿಕೆ ಹಾಗೂ ಯೋಜನೆಗಳ ಪರಿಶೀಲನೆ ನಡೆಸಿದರು. ಹೊಸ ಒನ್ ಸ್ಟಾಪ್ ಸೆಂಟರ್ ಒಂದೇ ಬಾರಿಗೆ ಐದು ಜನರ ಸಾಮಥ್ರ್ಯವನ್ನು ಹೊಂದಿರುತ್ತದೆ. ಒನ್ ಸ್ಟಾಪ್ ಸೆಂಟರ್ ಪ್ರಸ್ತುತ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೊಸ ಕೇಂದ್ರದಲ್ಲಿ ಖಾಲಿ ಇರುವ ವಿವಿಧೋದ್ದೇಶ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗುವುದು. ಕಟ್ಟಡಕ್ಕೆ ಬೇಕಾದ ಪೂರಕ ಸೌಲಭ್ಯಗಳನ್ನೂ ಒದಗಿಸಲಾಗುವುದು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಾರಿಗೊಳಿಸಿರುವ ಪೂರ್ವಭಾವಿ ಸಮಾಲೋಚನೆ ಯೋಜನೆಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿ ಪೂರ್ವಭಾವಿ ಸಮಾಲೋಚನೆ ಕಾರ್ಯಕ್ರಮ ಆಯೋಜಿಸಲು ಸಭೆ ನಿರ್ಧರಿಸಿತು. ವಿವಾಹ ನೋಂದಣಿಗೆ ಸರಕಾರಿ ಮಟ್ಟದ ಅಥವಾ ಸರಕಾರದಿಂದ ಅನುಮೋದಿತ ವಿವಾಹ ಪೂರ್ವ ಸಮಾಲೋಚನೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸಂಬಂಧಪಟ್ಟ ಕಾನೂನಿಗೆ ತಿದ್ದುಪಡಿ ತರಲು ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು.
ಜಿಲ್ಲೆಯಲ್ಲಿ ವಿಧವೆಯರ ಸಮಗ್ರ ಉನ್ನತಿ ಮತ್ತು ರಕ್ಷಣೆಗಾಗಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ಮಹಿಳಾ ರಕ್ಷಣಾ ಕಚೇರಿ ಜಿಲ್ಲಾ ಮಟ್ಟದ ಸೆಲ್ ನೇತೃತ್ವದಲ್ಲಿ ಜಂಟಿ ಯೋಜನೆಗೆ ಹೆಚ್ಚಿನ ಜನರನ್ನು ಸೇರಿಸಲು ಕ್ರಮಕೈಗೊಳ್ಳಲಾಗುವುದು. ಆಸಕ್ತರು ಕೂಟ್ ವೆಬ್‍ಸೈಟ್ ಅಥವಾ ಕೂಟ್ ಅಪ್ಲಿಕೇಶನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು. ಪುರುಷರು ನೇರವಾಗಿ ಕಚೇರಿಗೆ ಅರ್ಜಿ ಸಲ್ಲಿಸಿದರೆ ಅವರನ್ನೂ ಪರಿಗಣಿಸಲಾಗುವುದು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಎಡಿಎಂ ಎ.ಕೆ.ರಾಮೇಂದ್ರನ್, ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಕಾರ್ಯದರ್ಶಿ ಬಿ.ಕರುಣಾಕರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ, ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ಎಂ.ವಿ.ಸುನಿತಾ ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.