ನವದೆಹಲಿ: ದೇಶದ ಬಹುತೇಕ ಪ್ರದೇಶಗಳಲ್ಲಿ ಉಷ್ಣ ಅಲೆ ಅಂತ್ಯವಾಗಿದ್ದು, ಸೋಮವಾರ ಭಾರತೀಯ ಹವಾಮಾನ ಇಲಾಖೆಯು ಉತ್ತರ ಭಾರತಕ್ಕೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.
ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಭಾರತದ ಬಹುತೇಕ ಭಾಗಗಳಲ್ಲಿ ಬಿಸಿಗಾಳಿಯು ಅಂತ್ಯಗೊಳ್ಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಆರ್ ಕೆ ಜೇನಮಣಿ ಅವರು ಹೇಳಿದ್ದಾರೆ. ಆದಾಗ್ಯೂ, ಪಶ್ಚಿಮ ರಾಜಸ್ಥಾನ ಮತ್ತು ವಿದರ್ಭದಲ್ಲಿ ಉಷ್ಣ ಅಲೆ ಆವರಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.
"ನಾವು ಊಹಿಸಿದಂತೆ ಒಡಿಶಾ ಮತ್ತು ಬಂಗಾಳದಲ್ಲಿ ಬಿಸಿಗಾಳಿಯು ಏಪ್ರಿಲ್ 30 ರಂದು ಅಂತ್ಯವಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಬಲವಾದ ಗಾಳಿ ಬೀಸಲಿದೆ. ಪಶ್ಚಿಮದಲ್ಲಿ ಪ್ರಕ್ಷುಬ್ಧತೆ ಇರುವುದರಿಂದ ನಾವು ವಾಯುವ್ಯ ಭಾರತಕ್ಕೂ ಯೆಲ್ಲೊ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಜೇನಮಣಿ ಅವರು ತಿಳಿಸಿದ್ದಾರೆ.
ಮೇ 3 ರಂದು ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಪಂಜಾಬ್ ಹಳದಿ ಅಲರ್ಟ್‌ನಲ್ಲಿವೆ ಮತ್ತು ನಾಳೆ ಬಲವಾದ ಗಾಳಿ ಬೀಸುತ್ತದೆ ಹಾಗೂ ಮಳೆಯಾಗುವ ಸಂಭವವಿದೆ" ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಪ್ರಕ್ಷುಬ್ಧತೆ ತುಂಬಾ ಸಕ್ರಿಯವಾಗಿದೆ ಮತ್ತು ದೆಹಲಿ, ಲಖನೌ ಹಾಗೂ ಜೈಪುರದಲ್ಲಿ ಬಿರುಗಾಳಿ ಸಹಿತ ಮಳೆಯಾಗಬಹುದು. ಮುಂದಿನ 6-7 ದಿನಗಳವರೆಗೆ ಪೂರ್ವ ಮಾರುತಗಳು ತುಂಬಾ ಪ್ರಬಲವಾಗಿರುತ್ತವೆ ಮತ್ತು ತಾಪಮಾನವು ಹೆಚ್ಚಾಗುವುದಿಲ್ಲ ಎಂದು ಜೇನಮಣಿ ಅವರು ತಿಳಿಸಿದ್ದಾರೆ.