ನವದೆಹಲಿ: ಫ್ರಾನ್ಸ್‌ನಲ್ಲಿ ನಡೆಯುವ ಪ್ರತಿಷ್ಠಿತ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜತೆಗೆ ಆಯೋಜಿಸಲಾಗುವ ಮುಂಬರುವ ಮಾರ್ಚೆ ಡು ಫಿಲ್ಮ್ (ಸಿನಿಮಾ ಮಾರುಕಟ್ಟೆ) ನಲ್ಲಿ ಭಾರತವು ಗೌರವ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಬುಧವಾರ ತಿಳಿಸಿದ್ದಾರೆ.
ಫ್ರಾನ್ಸ್ ಮತ್ತು ಭಾರತ ನಡುವಿನ ರಾಜತಾಂತ್ರಿಕ ಸಂಬಂಧವು 75 ವರ್ಷಗಳನ್ನು ಪೂರೈಸುತ್ತಿದೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಪ್ಯಾರಿಸ್ ಪ್ರವಾಸ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿರುವುದು ಈ ಸಂದರ್ಭದಲ್ಲಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಮಹತ್ವದ ರಾಜತಾಂತ್ರಿಕ ಹಿನ್ನೆಲೆಯಲ್ಲಿ ಕಾನ್ ಚಲನಚಿತ್ರೋತ್ಸವದ ಮಾರ್ಚೆ ಡು ಫಿಲ್ಮ್‌ನಲ್ಲಿ ಭಾರತವನ್ನು ಗೌರವ ರಾಷ್ಟ್ರವಾಗಿ ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಾರ್ಚೆ ಡು ಫಿಲ್ಮ್ ಅಧಿಕೃತ ಗೌರವ ರಾಷ್ಟ್ರವನ್ನು ಹೊಂದಿದ್ದು, ಭವಿಷ್ಯದಲ್ಲಿ ವಾರ್ಷಿಕವಾಗಿ ವಿವಿಧ ರಾಷ್ಟ್ರಗಳೊಂದಿಗೆ ಇದನ್ನು ಮುಂದುವರಿಸಿಕೊಂಡು ಹೋಗಲಿದೆ.
ಗೌರವ ಸ್ಥಾನಮಾನದ ದೇಶವು ಏನನ್ನು ಒಳಗೊಂಡಿರುತ್ತದೆ?
ಮೊದಲಿಗೆ ಗೌರವ ರಾಷ್ಟ್ರದ ಸ್ಥಾನಮಾನದ ಮೂಲಕ ಮಾರ್ಚೆ ಡು ಫಿಲ್ಮ್‌ನಲ್ಲಿ ಭಾರತವು ತನ್ನ ಉಪಸ್ಥಿತಿಯನ್ನು ಖಾತ್ರಿಗೊಳಿಸುತ್ತದೆ. ಭಾರತವು ಅದರ ಸಿನಿಮಾ, ಸಂಸ್ಕೃತಿ ಮತ್ತು ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಮೆಜೆಸ್ಟಿಕ್ ಬೀಚ್‌ನಲ್ಲಿ ಆಯೋಜಿಸಲಾಗುವ ಮಾರ್ಚ್ ಡು ಫಿಲ್ಮ್ಸ್‌ನ ಓಪನಿಂಗ್ ನೈಟ್‌ನಲ್ಲಿ ಭಾರತವು ಪ್ರಮುಖ ರಾಷ್ಟ್ರವಾಗಿರುತ್ತದೆ. ಈ ವೇಳೆ ಜಾನಪದ ಸಂಗೀತ ಮತ್ತು ಪಟಾಕಿಗಳೊಂದಿಗೆ ಭಾರತೀಯ ಗಾಯಕ ಬ್ಯಾಂಡ್‌ಗಳ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ.
ಮಾರ್ಚೆ ಡು ಫಿಲ್ಮ್ಸ್ನಲ್ಲಿ ಆರ್ ಮಾಧವನ್ ನಿರ್ಮಿಸಿದ ರಾಕೆಟ್ರಿ ಚಿತ್ರದ ವಿಶ್ವ ಪ್ರಥಮ ಪ್ರದರ್ಶನವು ಭಾರತದ ಭಾಗವಹಿಸುವಿಕೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ಈ ಚಿತ್ರವನ್ನು ಮೇ 19, 2022 ರಂದು ಪ್ರದರ್ಶಿಸಲಾಗುತ್ತದೆ.
ಭಾರತದ ಐದು ಸಿನಿಮಾಗಳು
ಕಾನ್ ಸಿನಿಮೋತ್ಸವದ ಶೋಕೇಸ್ 'ಗೋಸ್ ಫಾರ್ ಕಾನ್'ಗೆ ವೇದಿಕೆಯಾಗಿರುವ ಜಗತ್ತಿನ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಗಳಲ್ಲಿ ಒಂದಾದ ಮಾರ್ಚೆ ಡು ಫಿಲ್ಮ್ (ಸಿನಿಮಾ ಮಾರುಕಟ್ಟೆ) ವಿವಿಧ ದೇಶಗಳ ಸಿನಿಮಾಗಳನ್ನು ಆಯ್ಕೆ ಮಾಡುತ್ತದೆ. ಇದಕ್ಕೆ ಭಾರತದ ಎನ್‌ಎಫ್‌ಡಿಸಿಗೆ ಪ್ರತ್ಯೇಕ ಸ್ಥಾನ ನೀಡಲಾಗಿದ್ದು, ಎನ್‌ಎಫ್‌ಡಿಸಿ ಫಿಲ್ಮ್ ಬಜಾರ್‌ನಲ್ಲಿ ಐದು ಭಾರತೀಯ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಕನ್ನಡದ ಜೈಶಂಕರ್ ನಿರ್ದೇಶನದ 'ಶಿವಮ್ಮ' ಕೂಡ ಸೇರಿದೆ. ಉಳಿದಂತೆ ಜೈಚೆಂಗ್ ಝಕ್ಸೈ ದೋಹುಟಿಯಾ ನಿರ್ದೇಶನದ ಅಸ್ಸಾಂ, ಮೋರನ್ ಭಾಷೆಯ ಬಾಘ್ಜಾನ್, ಶೈಲೇಂದ್ರ ಸಾಹು ನಿರ್ದೇಶನದ ಹಿಂದಿ, ಛತ್ತೀಸ್ಗರ್ಹಿ ಭಾಷೆಯ ಬೈಲಾಡಿಲಾ, ಎಕ್ತಾರ ಕಲೆಕ್ಟಿವ್ ನಿರ್ದೇಶನ ಹಿಂದಿ ಭಾಷೆಯ ಏಕ್ ಜಾಗಹ್ ಅಪ್ನಿ ಮತ್ತು ಹರ್ಷದ್ ನಾಲ್ವಾಡೆ ನಿರ್ದೇಶನದ ಮರಾಠಿ, ಕನ್ನಡ ಮತ್ತು ಹಿಂದಿ ಭಾಷೆಯ ಫಾಲೋವರ್ ಚಿತ್ರಗಳು ಪ್ರದರ್ಶನವಾಗಲಿವೆ.
ಆಯ್ಕೆಯಾದ ಚಲನಚಿತ್ರಗಳು ಮೇ 22ರಂದು ರಂದು ಒಲಂಪಿಯಾ ಸ್ಕ್ರೀನ್ ಎಂಬ ಸಿನಿಮಾ ಹಾಲ್ನಲ್ಲಿ ಪ್ರದರ್ಶನಗೊಳ್ಳುತ್ತದೆ.