ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ಭೇಟಿ ನೀಡಿದ್ದು, ದೇವರ ದರ್ಶನ ಪಡೆದುಕೊಂಡರು.
ಇದೇ ವೇಳೆ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅವರನ್ನು ಆಡಳಿತ ಮಂಡಳಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿತು. ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಗೋವಿಂದ ಅಡಿಗ, ನರಸಿಂಹ ಅಡಿಗರ ಉಸ್ತುವಾರಿಯಲ್ಲಿ ದೇವಿಗೆ ಆಯೋಜಿತವಾಗಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಮನ ಸಲ್ಲಿಸಿದರು. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸಹ ಇದ್ದರು.
ಇಂದು ಮಧ್ಯಾಹ್ನ 2.30ಕ್ಕೆ ಉಡುಪಿ ಕುಕ್ಕಿಕಟ್ಟೆಯಲ್ಲಿರುವ ಶ್ರೀಕೃಷ್ಣ ಬಾಲನಿಕೇತನದಲ್ಲಿ ವಿಸ್ತರಿತ ನೂತನ ಕಟ್ಟಡ ಉದ್ಘಾಟಿಸಿದರು. ಮಧ್ಯಾಹ್ನ 4 ಗಂಟೆಗೆ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಸಂಸ್ಥೆಯ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗಿಯಾದರು.
ಭಾನುವಾರ ಬೆಂಗಳೂರಿನಲ್ಲಿ ಆಯೋಜಿತವಾಗಿರುವ ಎರಡು ಕಾರ್ಯಕ್ರಮಗಳಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ.