ಶ್ರೀನಗರ: ಭಾರತವೂ ನೆರೆ ರಾಷ್ಟ್ರದ ಹಾದಿಯಲ್ಲಿದ್ದು, ಶ್ರೀಲಂಕಾದ ಪರಿಸ್ಥಿತಿ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಮುನ್ನೆಚ್ಚರಿಕೆಯೊಂದಿಗೆ ಕೆಲಸ ಮಾಡಬೇಕು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ಪ್ರಕ್ಷುಬ್ಧತೆಯ ಮಧ್ಯೆ ಮಹಿಂದಾ ರಾಜಪಕ್ಸೆ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಬೆಂಬಲಿಗರು ಸರ್ಕಾರಿ ವಿರೋ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ್ದರಿಂದ ಹಲವು ಸಾವು ನೋವುಗಳಾದವು. ನಂತರ ತುರ್ತು ಪರಿಸ್ಥಿತಿ ಘೋಷಿಸಲಾಯಿತು.
ಈ ಕುರಿತು ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಶ್ರೀಲಂಕಾದಲ್ಲಿ ಏನಾಯಿತು ಎಂಬುದು ಎಚ್ಚರಿಕೆಯ ಕರೆಯಾಗಿದೆ. 2014 ರಿಂದ ಭಾರತವನ್ನು ಕೋಮು ಉನ್ಮಾದ ಮತ್ತು ಕಲ್ಪಿತ ಭಯಕ್ಕೆ ತಳ್ಳಲಾಗುತ್ತಿದೆ. ರಾಷ್ಟ್ರೀಯತೆ ಮತ್ತು ಧಾರ್ಮಿಕ ಬಹುಮತಕ್ಕೆ, ಸಾಮಾಜಿಕ ಒಗ್ಗಟ್ಟಿಗೆ ಅಡ್ಡಿ ಪಡಿಸಲಾಗುತ್ತಿದೆ. ಆರ್ಥಿಕ ಭದ್ರತೆಗೂ ಅಪಾಯವಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.