2020 ಮತ್ತು 2021ರಲ್ಲಿ ನಡೆದ ಬೃಹತ್ ರೈತರ ಆಂದೋಲನದ (Farmers Protest) ನೇತೃತ್ವ ವಹಿಸಿದ್ದ ರಾಕೇಶ್ ಟಿಕಾಯತ್ ಅವರನ್ನು (Rakesh Tikait) ಭಾರತೀಯ ಕಿಸಾನ್ ಯೂನಿಯನ್ (BKU) ಸಂಘಟನೆಯಿಂದ ಹೊರಹಾಕಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಈ ನಿರ್ಧಾರದ ಮೂಲಕ ಇಬ್ಭಾಗವಾದಂತಾಗಿದೆ. ರಾಕೇಶ್ ಟಿಕಾಯತ್ ಅವರ ಸಹೋದರ ನರೇಶ್ ಟಿಕಾಯತ್ (Naresh Tikait) ಅವರನ್ನೂ ಸಹ ಭಾರತೀಯ ಕಿಸಾನ್ ಯೂನಿಯನ್ ಉಚ್ಛಾಟಿಸಿದೆ. ಈ ಮೂಲಕ ಕೃಷಿಕರ ಬೃಹತ್ ಸಂಘಟನೆಯಾಗಿದ್ದ ಭಾರತೀಯ ಕಿಸಾನ್ ಯೂನಿಯನ್ ಇಬ್ಭಾಗವಾದಂತಾಗಿದೆ.
ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಮತ್ತು ವಕ್ತಾರ ರಾಕೇಶ್ ಟಿಕಾಯತ್ ಸಹೋದರರ ವಿರುದ್ಧ ರೈತರ ಒಂದು ವಿಭಾಗವು ಬಂಡಾಯವೆದ್ದು ಭಾನುವಾರ ಲಕ್ನೋದಲ್ಲಿ ಭಾರತೀಯ ಕಿಸಾನ್ ಯೂನಿಯನ್ನಲ್ಲಿ ತಮ್ಮದೇ ಆದ ಗುಂಪನ್ನು ರಚಿಸಿಕೊಂಡು ಈ ನಿರ್ಧಾರವನ್ನು ಕೈಗೊಂಡಿದೆ.
ಹೊಸ ಗುಂಪಿನ ನಾಯಕ ಯಾರು? ಯಾರೆಲ್ಲ ಇದ್ದಾರೆ?
ಭಾರತೀಯ ಕಿಸಾನ್ ಯೂನಿಯನ್ನ ಹೊಸ ಗುಂಪಿನ ಅಧ್ಯಕ್ಷರಾಗಿ ರಾಜೇಶ್ ಸಿಂಗ್ ಚೌಹಾಣ್ ಆಯ್ಕೆಯಾಗಿದ್ದಾರೆ. ರಾಜೇಂದ್ರ ಸಿಂಗ್ ಮಲಿಕ್, ಅನಿಲ್ ತಲಾನ್, ಹರ್ನಾಮ್ ಸಿಂಗ್ ವರ್ಮಾ, ಬಿಂದು ಕುಮಾರ್, ಕುನ್ವರ್ ಪರ್ಮಾರ್ ಸಿಂಗ್ ಮತ್ತು ನಿತಿನ್ ಸಿರೋಹಿ ಸೇರಿದಂತೆ ಇತರ ನಾಯಕರು ಹೊಸ ಗುಂಪಿಗೆ ಸೇರಿದ್ದಾರೆ. ಇದು ರೈತರ ಹಿತದೃಷ್ಟಿಯಿಂದ ಕೆಲಸ ಮಾಡುತ್ತದೆ ಮತ್ತು ರಾಜಕೀಯದಲ್ಲಿ ಭಾಗಿಯಾಗುವುದಿಲ್ಲ ಎಂದು ಭರವಸೆ ನೀಡಿದೆ.
ರಾಕೇಶ್ ಟಿಕಾಯತ್ ಏನಂದ್ರು?
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯತ್, ಭಾರತೀಯ ಕಿಸಾನ್ ಯೂನಿಯನ್ನಲ್ಲಿ ನಂಬಿಕೆಯಿಲ್ಲದವರು ಸಂಘಟನೆಯಿಂದ ಹೊರ ಹೋಗಲು ಸ್ವತಂತ್ರರು ಎಂದು ಹೇಳಿದ್ದಾರೆ. ಈ ಹಿಂದೆಯೂ ಅನೇಕರು ನಮ್ಮ ಸಂಸ್ಥೆಯಾದ ಭಾರತೀಯ ಕಿಸಾನ್ ಯೂನಿಯನ್ ಅನ್ನು ತೊರೆದಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಉತ್ತರ ಪ್ರದೇಶದಲ್ಲಿಯೇ ಒಡೆದು 8-10 ಗುಂಪುಗಳಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ಒಡಕಿಗೆ ಸರ್ಕಾರವೇ ಕಾರಣ!
ಇದಲ್ಲದೆ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ಒಡಕಿಗೆ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ ರಾಕೇಶ್ ಟಿಕಾಯತ್. ಇದರ ಹಿಂದೆ ಸರಕಾರದ ಕೈವಾಡವಿದೆ. ಇಂದು ಒಂದಷ್ಟು ಮಂದಿ ಸರಕಾರದ ಮುಂದೆ ಶರಣಾಗಿದ್ದಾರೆ. ಮತ್ತೆ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯನ್ನು ಬಲಪಡಿಸುತ್ತೇವೆ ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ನಾವು ರಾಜಕೀಯ ವಿರೋಧಿಗಳು ಎಂದ ರಾಜೇಶ್ ಚೌಹಾಣ್,
ಈ ಎಲ್ಲ ಬೆಳವಣಿಗೆಗಳ ನಡುವೆ ವಿಘಟಿತ ಹೊಸ ಗುಂಪಿನ ನಾಯಕ ರಾಜೇಶ್ ಚೌಹಾಣ್, "ನಾವು ರಾಜಕೀಯ ವಿರೋಧಿಗಳು. ಆದರೆ ರಾಕೇಶ್ ಟಿಕಾಯತ್ 2022 ರ ಚುನಾವಣೆಯಲ್ಲಿ ಒಂದು ನಿರ್ದಿಷ್ಟ ಪಕ್ಷಕ್ಕಾಗಿ ಪ್ರಚಾರ ಮಾಡಿದರು. ಇನ್ನೊಂದು ಪಕ್ಷವನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿದರು. ಇದು ನಮ್ಮ ತತ್ವಗಳಿಗೆ ವಿರುದ್ಧವಾಗಿದೆ." ಎಂದು ಆರೋಪ ಮಾಡಿದ್ದಾರೆ.
"ನಾವು ರೈತರ ಹಿತದೃಷ್ಟಿಯಿಂದ ಮತ್ತು ಸಂಘಟನೆಯನ್ನು ಉಳಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ, ರಾಕೇಶ್ ಟಿಕಾಯತ್ ಮತ್ತು ನರೇಶ್ ಟಿಕಾಯಿತ್ ನಮ್ಮೊಂದಿಗೆ ಬರಲು ಬಯಸಿದರೆ, ಅವರಿಗೆ ಖಂಡಿತವಾಗಿಯೂ ಸ್ವಾಗತ ನೀಡುತ್ತೇವೆ. ಆದರೆ ಅವರು ನಮ್ಮ ಹೊಸ ಸಂಘಟನೆಯ ತತ್ವಗಳನ್ನು ಅನುಸರಿಸಬೇಕು" ಎಂದು ಅವರು ಹೇಳಿದರು.