ಚಂಡೀಗಢ: ಕಾಂಗ್ರೆಸ್ ಮುಖಂಡರಾಗಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮಾನ್ಸಾ ಜಿಲ್ಲೆಯಲ್ಲಿ ನಡೆದ ಗುಂಡೇಟಿನಿಂದ ಸಿಧು ಜೊತೆಗಿದ್ದ ಇಬ್ಬರು ವ್ಯಕ್ತಿಗಳಿಗೂ ಗಾಯಗಳಾಗಿವೆ.
ಗುಂಡೇಟಿನಿಂದ ಗಾಯಗೊಂಡಿದ್ದ ಸಿಧು ಸೇರಿದಂತೆ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಮೂವರಲ್ಲಿ ಸಿಧು ಮೃತಪಟ್ಟಿರುವುದಾಗಿ ಮಾನ್ಸಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ರಂಜೀತ್ ರೈ ತಿಳಿಸಿದ್ದಾರೆ.
ಇಬ್ಬರು ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಸಂಸ್ಥೆಗೆ ಸೇರಿಸಲು ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪಂಜಾಬಿನ ಕಾಂಗ್ರೆಸ್ ಮುಖಂಡರು ಹಾಗೂ ಪ್ರತಿಭಾವಂತ ಗಾಯಕರಾಗಿದ್ದ ಸಿಧು ಮೂಸೆವಾಲ ಅವರ ಹತ್ಯೆ ಕಾಂಗ್ರೆಸ್ ಪಕ್ಷ ಹಾಗೂ ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ. ಸಿಧು ಮೂಸೆವಾಲ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ತೀವ್ರ ಸಂತಾಪ ಸೂಚಿಸುವುದಾಗಿ ಕಾಂಗ್ರೆಸ್ ಟ್ವೀಟ್ ನಲ್ಲಿ ತಿಳಿಸಿದೆ.