ಲಖನೌ: ನಾಯಿಗಳನ್ನು ಸಾಕಿರುವವರು ಸಹಜವಾಗಿ ತಾವು ಎಲ್ಲಿಗೆ ಹೋದರೂ ಅದನ್ನು ತಮ್ಮ ಜತೆ ಕರೆದುಕೊಂಡು ಹೋಗುತ್ತಾರೆ. ಏಕೆಂದರೆ ನಾಯಿಯನ್ನು ತಮ್ಮ ಮನೆಯ ಸದಸ್ಯನಂತೆ ಅವರು ಭಾವಿಸಿರುತ್ತಾರೆ. ಆದರೆ ಇದೀಗ ನಾಯಿಯೊಂದು ಕೇದಾರನಾಥದಲ್ಲಿ ಭಾರಿ ವಿವಾದ ಸೃಷ್ಟಿಸಿಬಿಟ್ಟಿದೆ.
ಇದಕ್ಕೆ ಕಾರಣ, ಯೂಟ್ಯೂಬರ್‌ನೊಬ್ಬ ತನ್ನ ನಾಯಿಯನ್ನು ಕೇದಾರನಾಥಕ್ಕೆ ಕರೆದುಕೊಂಡು ಹೋಗಿರುವುದು. ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ನವಾಬ್ ಎಂಬ ತನ್ನ ಸೈಬೀರಿಯನ್ ಹಸ್ಕಿಯನ್ನು 33 ವರ್ಷದ ವಿಕಾಸ್ ತ್ಯಾಗಿ ಕರೆದುಕೊಂಡು ಹೋಗಿದ್ದ. ಕೇದಾರನಾಥದಲ್ಲಿ ಆತ ನಾಯಿಯನ್ನು ನಂದಿಗೆ ಮುಟ್ಟಿಸಿದ್ದಾನೆ, ಅದೂ ಶೂಸ್ ತೆಗೆಯದೇ! ಕೆಲವರು ನಾಯಿಯ ಮೇಲೆ ಕೆಂಗಣ್ಣು ಬೀರಿದ್ದರೆ ಇನ್ನು ಕೆಲವರು ಚಪ್ಪಲಿ ಧರಿಸಿ ಶಿವಲಿಂಗವನ್ನು ಆತ ಸ್ಪರ್ಶಿಸಿರುವುದು ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಿನಲ್ಲಿ ಈಗ 33 ವರ್ಷದ ವಿಕಾಸ್ ತ್ಯಾಗಿ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಶೂಸ್ ಹಾಕಿಕೊಂಡು ಹೀಗೆ ನಡೆದುಕೊಂಡು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವುದಕ್ಕೆ ಬಹುತೇಕ ಮಂದಿಯ ಸಹಮತವಿದೆ. ಆದರೆ ಈತನ ವಿರುದ್ಧ ದೂರು ದಾಖಲಾಗಿರುವುದಕ್ಕೆ ಪ್ರಮುಖ ಕಾರಣ ನಾಯಿ. ಇದಕ್ಕೆ ಅನೇಕ ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಕಾಸ್ ತ್ಯಾಗಿ ಮೊದಲು ತಾನು ನಂದಿಗೆ ನಮಸ್ಕರಿಸಿ ನಂತರ ತನ್ನ ನಾಯಿಯನ್ನು ಅದಕ್ಕೆ ನಮಸ್ಕರಿಸುವಂತೆ ಮಾಡಿರುವುದು, ಕೊನೆಗೆ ಪುರೋಹಿತನು ನಾಯಿಯ ತಲೆಯ ಮೇಲೆ ತಿಲಕ ಇಡುವ ವಿಡಿಯೋ ವೈರಲ್ ಆಗಿತ್ತು. ನಾಯಿ ದೇವರ ಸಮಾನ, ನಂದಿಯನ್ನು ಅದು ಸ್ಪರ್ಶಿಸಿರುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಅನೇಕ ಮಂದಿ ವಾದಿಸುತ್ತಿದ್ದಾರೆ. ಆದರೆ ತಾನು ಶೂಸ್ ಧರಿಸಿ ನಮಸ್ಕರಿಸಿರುವುದು ಮಾತ್ರವಲ್ಲದೇ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿ ನಾಯಿಯನ್ನು ನಂದಿ ವಿಗ್ರಹಕ್ಕೆ ಮುಟ್ಟಿಸಿರುವುದು ಅಕ್ಷಮ್ಯ ಎಂದು ಇನ್ನು ಹಲವರು ವಾದಿಸುತ್ತಿದ್ದಾರೆ.
ಒಟ್ಟಿನಲ್ಲಿ ಈತನ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಅವರ ಆದೇಶದ ಮೇರೆಗೆ ಸಿಇಒ ಸಲ್ಲಿಸಿದ ದೂರಿನ ಆಧಾರದ ಮೇಲೆ ತ್ಯಾಗಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ನಾನು ನಾಲ್ಕು ವರ್ಷಗಳಿಂದ ವಿವಿಧ ದೇವಾಲಯಗಳಿಗೆ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ತ್ಯಾಗಿ ಪ್ರಶ್ನಿಸಿದ್ದಾನೆ.
ಇಲ್ಲಿದೆ ನೋಡಿ ವಿಡಿಯೋ: