ಮಂಜೇಶ್ವರ: ಬಾಲ್ಯದಲ್ಲೇ ಕುಷ್ಠರೋಗದ ಆರಂಭಿಕ ಪತ್ತೆ ಕಾರ್ಯಕ್ರಮವಾದ 'ಬಾಲಮಿತ್ರ' ಅಭಿಯಾನವನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ. ಬಾಲಮಿತ್ರ ಕುಷ್ಠರೋಗದ ಸಮಗ್ರ ನಿರ್ಮೂಲನೆಯ ಭಾಗವಾಗಿ ಬಾಲ್ಯದ ಕುಷ್ಠರೋಗದ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಬಾಲಮಿತ್ರ ಕಾರ್ಯಕ್ರಮದ ಆರಂಭಿಕ ಹಂತದಲ್ಲಿ 0-6 ವರ್ಷದ ಮಕ್ಕಳಿಗೆ ಅಂಗನವಾಡಿ ಮಟ್ಟದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಿ ರೋಗ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುವುದು. ಅಪಾಯದಲ್ಲಿರುವವರ ಪಟ್ಟಿಯನ್ನು ಸಿದ್ಧಪಡಿಸುವುದು ಮೊದಲ ಹಂತವಾಗಿದೆ. ನಂತರ ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ತೆರಳಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಿದ್ದಾರೆ. ಸಾಮಾಜಿಕ ಮಾಧ್ಯಮದ ಸಹಾಯದಿಂದ ಕುಷ್ಠರೋಗ ನಿರ್ಮೂಲನಾ ಚಟುವಟಿಕೆಗಳಲ್ಲಿ ಸಾಮೂಹಿಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಆರೋಗ್ಯ ಇಲಾಖೆ, ಆರೋಗ್ಯ ಕೇರಳ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕುಷ್ಠರೋಗ ಅಧಿಕಾರಿ ಟಿ.ಕೆ.ಶ್ರೀಕುಮಾರ್ ಯೋಜನೆ ಬಗ್ಗೆ ವಿವರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಕಾರ್ಯಕ್ರಮಾಧಿಕಾರಿ ಸಿ.ಎ.ಬಿಂದು, ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಟತ್ತಿಲ್ ಮಾತನಾಡಿದರು. ಉಪ ಜಿಲ್ಲಾ ವೈದ್ಯಾಧಿಕಾರಿ ಡಾ. ಇ ಮೋಹನನ್ ಸ್ವಾಗತಿಸಿ, ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದ ಇನ್ಸ್‍ಪೆಕ್ಟರ್ ಲಿಯಾಖತ್ ಅಲಿ ವಂದಿಸಿದರು. ಉಪ ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಎಸ್.ಸಯನಾ, ವೈದ್ಯಕೀಯೇತರ ಮೇಲ್ವಿಚಾರಕರಾದ ರಾಜನ್ ಕರಿಂಬಿಲ್ ಮತ್ತು ಸಿ.ಮಧುಸೂದನನ್, ಮಂಜೇಶ್ವರ ಬ್ಲಾಕ್‍ನ ಆರೋಗ್ಯ ಕಾರ್ಯಕರ್ತರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.