ಕೊಚ್ಚಿ: ತಿರುವನಂತಪುರಂನಲ್ಲಿ ನಡೆದ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನು ರದ್ದಾದ ಬಳಿಕ ಪಿಸಿ ಜಾರ್ಜ್ ಪೋಲೀಸ್ ಠಾಣೆಗೆ ಹಾಜರಾದರು. ಪಲರಿವಟ್ಟಂ ಪೋಲೀಸ್ ಠಾಣೆಗೆ ಹಾಜರಾಗಿ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇನೆ ಎಂದು ಮಾಜಿ ಶಾಸಕರು ಹೇಳಿದ್ದಾರೆ. ಅವರು ತಮ್ಮ ಮಗ ಸೀನ್ ಜಾರ್ಜ್ ಅವರೊಂದಿಗೆ ಠಾಣೆಗೆ ಹಾಜರಾದರು. ಸದ್ಯದಲ್ಲೇ ಪೋಲೀಸರು ಬಂಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಜಾಮೀನು ರದ್ದತಿಗೆ ಸಂಬಂಧಿಸಿದಂತೆ ಪಿಸಿ ಜಾರ್ಜ್ ಅವರನ್ನು ಬಂಧಿಸುವಂತೆ ತಿರುವನಂತಪುರಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೋರ್ಟ್ ಸಹಾಯಕ ಪೋಲೀಸ್ ಆಯುಕ್ತರಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ಅವರ ಪುತ್ರ ಸೀನ್ ಜಾರ್ಜ್ ಕೂಡ ಪಿಸಿ ಜಾರ್ಜ್ ಬಂಧನಕ್ಕೆ ಸಿದ್ಧ ಎಂದು ಘೋಷಿಸಿದ್ದರು. ಪಲರಿವಟ್ಟಂ ಪೋಲೀಸ್ ಠಾಣೆಗೆ ಹಾಜರಾಗಿ ಕಾನೂನು ಮತ್ತು ನ್ಯಾಯಾಲಯಕ್ಕೆ ಬದ್ಧನಾಗಿರುತ್ತೇನೆ ಎಂದು ಶಾನ್ ಹೇಳಿದ್ದಾರೆ. ಪಿಡಿಪಿ ಕಾರ್ಯಕರ್ತರು ಪೋಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ತಿರುವನಂತಪುರಂನಲ್ಲಿ ನಡೆದ ಹಿಂದೂ ಮಹಾಸಮ್ಮೇಳನದಲ್ಲಿ ಪಿಸಿ ಜಾರ್ಜ್ ಮಾಡಿದ ಭಾಷಣ ವಿವಾದಕ್ಕೀಡಾಗಿತ್ತು. ಇದರ ವಿರುದ್ಧ ಪೋರ್ಟ್ ಪೆÇಲೀಸರು ಸ್ವಯಂ ಪ್ರೇರಿತವಾಗಿ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಜಾರ್ಜ್ ಅವರನ್ನು ಎರಟ್ಟುಪೆಟ್ಟಾದಲ್ಲಿನ ಅವರ ಮನೆಯಿಂದ ಬಂಧಿಸಲಾಯಿತು. ಆದರೆ ಕೆಲವೇ ಗಂಟೆಗಳಲ್ಲಿ ಪಿಸಿ ಜಾರ್ಜ್ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಜಾಮೀನು ರದ್ದು ಕೋರಿ ಪ್ರಾಸಿಕ್ಯೂಷನ್ ಮತ್ತು ಪೋಲೀಸರು ನ್ಯಾಯಾಲಯದ ಮೊರೆ ಹೋಗಿದ್ದರು.