ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಮನಸೋ ಇಚ್ಚೆ ಆಡಳಿತ ಮುಂದುವರೆದಿದ್ದು, ಈ ಹಿಂದೆ ಮಹಿಳಾ ಚಾಲನಾ ಪರವಾನಗಿ ರದ್ದು ಮಾಡಿದ್ದ ತಾಲಿಬಾನ್ ಸರ್ಕಾರ ಇದೀಗ ಮಾನವ ಹಕ್ಕುಗಳ ಆಯೋಗವನ್ನೇ ರದ್ದು ಮಾಡಿದೆ.
ತನ್ನ ದೇಶಕ್ಕೆ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ ಅಗತ್ಯವಿಲ್ಲ ಎಂದು ಪರಿಗಣಿಸಿ ಅದನ್ನು ರದ್ದು ಮಾಡಲಾಗಿದೆ ಎಂದು ತಾಲಿಬಾನ್ ಆಡಳಿತದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ತಾಲಿಬಾನ್ ಸರ್ಕಾರದ ಉಪ ವಕ್ತಾರ ಇನಾಮುಲ್ಲಾ ಸಮಂಗನಿ, 'ಅಫ್ಗಾನಿಸ್ತಾನದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಇತರೆ ಸಂಘ ಸಂಸ್ಥೆಗಳಿವೆ. ಅವು ನ್ಯಾಯಾಂಗದೊಂದಿಗೆ ಸಂಪರ್ಕ ಹೊಂದಿವೆ. ಹಾಗಾಗಿ ಸದ್ಯಕ್ಕೆ ದೇಶದಲ್ಲಿ ಮಾನವ ಹಕ್ಕುಗಳ ಆಯೋಗದ ಅಗತ್ಯ ಇಲ್ಲ. ಭವಿಷ್ಯದಲ್ಲಿ ಇದರ ಅಗತ್ಯ ಎದುರಾದರೆ ಮತ್ತೆ ಕಾರ್ಯಾರಂಭಿಸಲಿದೆ’ ಎಂದು ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ತಾಲಿಬಾನ್, ಚುನಾವಣಾ ಆಯೋಗ ಮತ್ತು ಮಹಿಳಾ ಸಚಿವಾಲಯ ಸೇರಿದಂತೆ ಅಫ್ಗನ್ನರ ಸ್ವಾತಂತ್ರ್ಯವನ್ನು ರಕ್ಷಿಸುತ್ತಿದ್ದ ಹಲವು ಸಂಸ್ಥೆಗಳನ್ನು ರದ್ದು ಮಾಡಿದೆ. ಇತ್ತೀಚೆಗಷ್ಟೇ ಮಹಿಳಾ ಶಿಕ್ಷಣ, ಮಹಿಳಾ ಉದ್ಯೋಗಿಗಳಿಗೆ ನಿಷೇಧ ಮತ್ತು ಮಹಿಳೆಯರ ಚಾಲನಾ ಪರವಾನಗಿ ರದ್ದು ಸೇರಿದಂತೆ ಹಲವು ವಿವಾಧಿತ ಕ್ರಮಗಳನ್ನು ತಾಲಿಬಾನ್ ಸರ್ಕಾರ ಕೈಗೊಂಡಿದೆ.