ನವದೆಹಲಿ: ವಿದೇಶಿ ದೇಣಿಗೆ ಪಡೆಯುವಲ್ಲಿ ನಿಯಮಗಳ ಉಲ್ಲಂಘನೆಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಲಾಭರಹಿತ ಸಂಸ್ಥೆಗಳ ಪರವಾಗಿ ಲಂಚ ಪಡೆದಿದ್ದಕ್ಕಾಗಿ ಐವರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಮೂಲಗಳು ತಿಳಿಸಿವೆ. ಸೋಮವಾರ ರಾಷ್ಟ್ರವ್ಯಾಪಿ 40 ಸ್ಥಳಗಳಲ್ಲಿ ನಡೆಸಿದ ದಾಳಿ ವೇಳೆ ಸಿಬಿಐ ಈ ಕ್ರಮ ಕೈಗೊಂಡಿದೆ.
ಗೃಹ ಸಚಿವಾಲಯದ ಅಧಿಕಾರಿಗಳು, ಸಿಬಿಐ ಮೂಲಗಳು, ಲಂಚ ಪಡೆದು ಸರ್ಕಾರೇತರ ಸಂಸ್ಥೆ ಅಥವಾ ಎನ್‌ಜಿಒಗಳಿಗೆ ಅಕ್ರಮ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಕ್ಲಿಯರೆನ್ಸ್‌ಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಗೃಹ ಸಚಿವಾಲಯದ ಸಾರ್ವಜನಿಕ ಅಧಿಕಾರಿಗಳು, ಎನ್‌ಜಿಒ ಪ್ರತಿನಿಧಿಗಳು ಮತ್ತು ಮಧ್ಯವರ್ತಿಗಳು ವಿದೇಶಿ ನಿಧಿ ಮಂಜೂರಾತಿಯನ್ನು ಪಡೆಯಲು ಲಂಚವನ್ನು ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ, ರಾಜಸ್ಥಾನ, ಚೆನ್ನೈ, ಮೈಸೂರು ಸೇರಿದಂತೆ ಇತರೆಡೆ ಶೋಧ ನಡೆಸಿದ ನಂತರ ಹವಾಲಾ ಮಾರ್ಗಗಳ ಮೂಲಕ ಸುಮಾರು 2 ಕೋಟಿ ರೂ. ಅಕ್ರಮ ವಹಿವಾಟು ಪತ್ತೆಯಾಗಿದೆ ಎಂದು ಸಿಬಿಐ ಸಂಸ್ಥೆ ತಿಳಿಸಿದೆ. ಗೃಹ ಸಚಿವಾಲಯದ ಸುಳಿವಿನ ಮೇರೆಗೆ ಸಿಬಿಐ ದಾಳಿ ನಡೆಸಿದೆ.