ಥಾಣೆ: ಅಪರಿಚಿತರ ಗುಂಪು ಅಮಾನ್ಯಗೊಂಡ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಸುಳ್ಳು ಹೇಳಿ ಉದ್ಯಮಿಯೊಬ್ಬರಿಗೆ ವಂಚನೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಅಮಾನ್ಯಗೊಂಡ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಭರವಸೆ ನೀಡಿ ಉಲ್ಹಾಸನಗರದ ಉದ್ಯಮಿಯೊಬ್ಬರಿಗೆ 67.5 ಲಕ್ಷ ರೂ. ವಂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಕಳೆದ ವರ್ಷ ಉದ್ಯಮಿಯ ಬಳಿಯಿಂದ ಅಪರಿಚಿತರ ಗುಂಪು ಬರೋಬ್ಬರಿ ೫ ಕೋಟಿ ರೂ. ಮೌಲ್ಯದ ಅಮಾನ್ಯಗೊಂಡ ನೋಟು ತೆಗೆದುಕೊಂಡು ಬದಲಾಯಿಸಿಕೊಡುವುದಾಗಿ ಹೇಳಿದೆ. ಇದಕ್ಕಾಗಿ ೬೦ ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಬಳಿಕ ತಾವು ಪೊಲೀಸರಾಗಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ಅಮಾನ್ಯಗೊಂಡ ನೋಟು ಹೊಂದಿರುವ ನಿಮ್ಮ ವಿರುದ್ಧ ಕೇಸ್ ದಾಖಲಿಸುವುದಾಗಿ ಉದ್ಯಮಿಗೆ ಬೆದರಿಕೆ ಹಾಕಿ ಮತ್ತೆ 7.50 ಲಕ್ಷ ರೂಪಾಯಿ ಪಡೆದಿದ್ದಾರೆ.
ಇವರೆಲ್ಲಾ ಪೊಲೀಸರು ಎಂದು ಹೇಳಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.