ಕೊಚ್ಚಿ: ಮನೆಗೆ ಬೀಗ ಹಾಕಿ ಹೊರ ತೆರಳುವವರಿಗೆ ಕೇರಳ ಪೋಲೀಸರು ನೆರವಿನ ಭರವಸೆ ನೀಡಿದ್ದಾರೆ. ಮನೆಯಿಂದ ಹೊರ ತೆರಳುವ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದರೆ ಮನೆ ಇರುವ ಪ್ರದೇಶದಲ್ಲಿ ವಿಶೇಷ ಪೋಲೀಸ್ ಗಸ್ತು ನಡೆಸಲಾಗುತ್ತದೆ. ಪೋಲೀಸರ ಅಧಿಕೃತ ಮೊಬೈಲ್ ಆಪ್ ಪೋಲ್ ಆಪ್ ನಲ್ಲಿರುವ ಲಾಕ್ಡ್ ಹೌಸ್ ಫೀಚರ್ ನ್ನು ಇದಕ್ಕಾಗಿ ಬಳಸಿಕೊಳ್ಳಬಹುದು. ಇದನ್ನು ಪೋಲೀಸರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಜನಸಂದಣಿ ಇಲ್ಲದ ಸಮಯದಲ್ಲಿ ಕಳ್ಳರು ಮತ್ತು ಸಮಾಜವಿರೋಧಿಗಳ ಹಿಂಸಾಚಾರವು ಮನೆಗಳಿಗೆ ಬೀಗ ಹಾಕಿಕೊಂಡು ದೂರದ ಪ್ರಯಾಣ ಮಾಡುವವರಿಗೆ ಮುಖ್ಯ ಸವಾಲಾಗಿದೆ. ಇದಕ್ಕೆ ಕಡಿವಾಣ ಹಾಕಲು ಕೇರಳ ಪೋಲೀಸರು ಈ ಹೊಸ ಯೋಜನೆ ಪ್ರಕಟಿಸಿದ್ದಾರೆ.
ನಿನ್ನೆ ಮಾಜಿ ಸಚಿವ ಶಿಬು ಬೇಬಿಜೋನ್ ಅವರ ಕುಟುಂಬದ ಮನೆಗೆ ಕಳ್ಳರು ನುಗ್ಗಿ ದೋಚಿದ ಘಟನೆ ನಡೆದಿತ್ತು. ಮಾಜಿ ಸಚಿವರ ಪತ್ನಿಯ ತಾಳಿ ಸೇರಿದಂತೆ ಸುಮಾರು 50 ಪವನ್ ಚಿನ್ನಾಭರಣ ಕಳ್ಳತನವಾಗಿತ್ತು.
ಇದೇ ವೇಳೆ ಪೋಲೀಸರ ಪ್ರಕಟಣೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೋಲೀಸರು ರಾತ್ರಿ ಗಸ್ತು ಪರಿಣಾಮಕಾರಿಯಾಗಿ ಮಾಡಿದರಷ್ಟೇ ಅಪರಾಧಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂಬುದು ಹಲವರ ಅಭಿಪ್ರಾಯ. ಹೊಸ ಯೋಜನೆಯನ್ನು ತೆರೆದ ಹೃದಯದೊಂದಿಗೆ ಈಗಾಗಲೇ ಹಲವರು ಸ್ವಾಗತಿಸಿದ್ದಾರೆ.