ಬದಿಯಡ್ಕ: ಕೇರಳ ಸರ್ಕಾರವು ಉದ್ಯಮಶೀಲತಾ ವರ್ಷಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಕೇರಳದಲ್ಲಿ ಒಂದು ಲಕ್ಷ ಉದ್ಯಮಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಯೋಜನೆಗೆ ಸಂಬಂಧಿಸಿದಂತೆ ಕುಂಬ್ಡಾಜೆ ಪಂಚಾಯತಿ ಮಟ್ಟದ ಕಾರ್ಯಾಗಾರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಪೊಸವಳಿಕೆ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಪಿ.ಸಜೀರ್ ಸ್ಟಾರ್ಟ್ ಅಪ್ ಹಾಗೂ ವಿವಿಧ ಸಬ್ಸಿಡಿ ಯೋಜನೆಗಳ ಕುರಿತು ವಿವರಿಸಿದರು. ವಿವಿಧ ವಾಣಿಜ್ಯೋದ್ಯಮ ನೆರವು ಯೋಜನೆಗಳ ಮೂಲಕ ಜನರನ್ನು ತಲುಪುವುದು, ಮತ್ತು ಕೈಗಾರಿಕಾ ಇಲಾಖೆಯಿಂದ ಉದ್ಯಮಿಗಳನ್ನು ಹುಡುಕುವುದು ಮತ್ತು ಆಸಕ್ತರನ್ನು ಮುಂದೆ ತರುವುದು ಜಾಗೃತಿ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಖದೀಜಾ, ಹರೀಶ ಗೋಸಾಡ, ಝೌರಾ, ಸುಂದರ ಮವ್ವಾರು, ಮುಮ್ತಾಜ್ ಹಾಗೂ ಸಿಡಿಎಸ್ ಅಧ್ಯಕ್ಷೆ ರೋಶನಿ ಮಾತನಾಡಿದರು. ಕುಂಬ್ಡಾಜೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಅಬ್ದುಲ್ ರಝಾಕ್ ಸ್ವಾಗತಿಸಿ, ಕೈಗಾರಿಕೆ ಇಲಾಖೆ ಇಂಟರನ್ ಅತುಲ್ ರಾಜ್ ವಂದಿಸಿದರು.