ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕುಸಿತದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯವನ್ನು ಒಪ್ಪಿಕೊಳ್ಳಬೇಕು ಮತ್ತು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವತ್ತ ಗಮನ ಹರಿಸುವ ಬದಲು ದೇಶದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸೋಮವಾರ ಹೇಳಿದ್ದಾರೆ.
ರಾಹುಲ್ ಗಾಂಧಿ, ತಮ್ಮ ಫೇಸ್‌ಬುಕ್ ಪುಟದಲ್ಲಿ “ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠವಾಗಿದ್ದು, ಪ್ರತಿ ಡಾಲರ್ ಗೆ 77.40 ರೂ.ಗೆ ಕುಸಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 100 ರೂ.ಗಿಂತ ಹೆಚ್ಚು ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 1000 ರೂಪಾಯಿಗೆ ಏರಿಸುವ ಗುರಿಯನ್ನು ಪ್ರಧಾನಿ ಈಗಾಗಲೇ ಸಾಧಿಸಿದ್ದಾರೆ. ಈಗ ರೂಪಾಯಿ ಮೌಲ್ಯವನ್ನು ಡಾಲರ್‌ಗೆ 100 ರೂ.ಗೆ ಕೊಂಡೊಯ್ಯುವ ಸರದಿ ಬಂದಿದೆ ಎಂದು ಟೀಕಿಸಿದ್ದಾರೆ.
ದೇಶವು ದೊಡ್ಡ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಇದೆ ಎಂದು ಹೇಳಿದ ರಾಹುಲ್, ಇಂತಹ ಕೆಟ್ಟ ಪರಿಸ್ಥಿತಿ ಹಿಂದೆಂದೂ ನೋಡಿರದ ಪರಿಸ್ಥಿತಿಗೆ ಬೆಳೆಯುತ್ತಲೇ ಇದೆ. ಪ್ರಧಾನಿಯವರು ದೇಶದ ಆರ್ಥಿಕ ಮತ್ತು ಸಾಮಾಜಿಕ ವಾಸ್ತವಗಳನ್ನು ಶಾಶ್ವತವಾಗಿ ಮುಚ್ಚಿಡಲು ಸಾಧ್ಯವಿಲ್ಲ. ನೈಜ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಮತ್ತು ಅದನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ. ಆದ್ದರಿಂದ ಈ ಸಮಯದಲ್ಲಿ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನಗಳನ್ನು ಮಾಡಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಮೋದಿಯವರೆ ಈ ಹಿಂದೆ ರೂಪಾಯಿ ಮೌಲ್ಯ ಕುಸಿದಾಗ ಮನಮೋಹನ್ ಅವರನ್ನು ಟೀಕಿಸುತ್ತಿದ್ದಿರಿ. ಈಗ ರೂಪಾಯಿ ಮೌಲ್ಯ ದಾಖಲೆಯ ಮಟಕ್ಕೆ ಕುಸಿದಿದೆ. ಆದರೆ ನಾನು ನಿಮ್ಮನ್ನು ಕುರುಡಾಗಿ ಟೀಕಿಸುವುದಿಲ್ಲ ಎಂದು ಗಾಂಧಿ ಟ್ವಿಟ್ ಮಾಡಿದ್ದಾರೆ.