ನವದೆಹಲಿ: ರಸ್ತೆ ಜಗಳ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದು ಜೈಲು ಶಿಕ್ಷೆಯ ಹೊರತಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು 1988ರ ರೋಡ್ ರೇಜ್ (ರಸ್ತೆ ಜಗಳ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಚುನಾವಣಾ ಕಾನೂನಿನ ನಿಬಂಧನೆಗಳನ್ನು ಉಲ್ಲೇಖಿಸಿ ಕಾನೂನು ತಜ್ಞರು ಗುರುವಾರ ಹೇಳಿದ್ದಾರೆ.
ತಜ್ಞರ ಅಭಿಪ್ರಾಯದಂತೆ, 'ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಾಗಿದ್ದರೆ, ಅವರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಿದ್ದರು. ಆದರೆ ಹಾಲಿ ಪ್ರಕರಣದಲ್ಲಿ ಸಿದುಗೆ ಒಂದು ವರ್ಷ ಜೈಲು ಶಿಕ್ಷೆ ಮಾತ್ರ ಆಗಿದ್ದು, ಹೀಗಾಗಿ ಈ ನಿಯಮ ಸಿದುಗೆ ಅನ್ವಯಿಸುವುದಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ-1951 ರ ಸೆಕ್ಷನ್ 8 ಅನರ್ಹತೆಯೊಂದಿಗೆ ವ್ಯವಹರಿಸುತ್ತದೆ ಎಂದು ಕಾನೂನು ತಜ್ಞ ಮತ್ತು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಅವರು ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಎಸ್ ಕೆ ಕೌಲ್ ಅವರ ಪೀಠವು ಸಿಧುಗೆ ಶಿಕ್ಷೆಯ ವಿಷಯದ ಕುರಿತು ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿತು. ಈ ಪ್ರಕರಣದಲ್ಲಿ 65 ವರ್ಷದ ವ್ಯಕ್ತಿಗೆ 'ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ' ಅಪರಾಧಕ್ಕಾಗಿ ಸಿಧು ಅವರನ್ನು ಮೇ 2018 ರಲ್ಲಿ ಸುಪ್ರೀಂ ಕೋರ್ಟ್ ತಪ್ಪಿತಸ್ಥರೆಂದು ಪರಿಗಣಿಸಿದ್ದರೂ, ಅದು ಅವರಿಗೆ ಜೈಲು ಶಿಕ್ಷೆಯನ್ನು ತಪ್ಪಿಸಿ ಮತ್ತು ರೂ 1,000 ದಂಡವನ್ನು ಮಾತ್ರ ವಿಧಿಸಿತ್ತು.
ಸೆಪ್ಟೆಂಬರ್ 2018 ರಲ್ಲಿ, ಮೃತರ ಕುಟುಂಬ ಸದಸ್ಯರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿತ್ತು. ದಾಖಲೆಯ ಮುಖಾಂತರ ಸ್ಪಷ್ಟವಾದ ದೋಷವಿದೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ, ನಾವು ಶಿಕ್ಷೆಯ ವಿಷಯದ ಕುರಿತು ಮರುಪರಿಶೀಲನಾ ಅರ್ಜಿಯನ್ನು ಅನುಮತಿಸಿದ್ದೇವೆ. ದಂಡದ ಜತೆಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದು ಸೂಕ್ತ ಎಂದು ಪರಿಗಣಿಸುತ್ತೇವೆ’ ಎಂದು ತೀರ್ಪು ಪ್ರಕಟಿಸುವ ವೇಳೆ ಪೀಠ ಹೇಳಿದೆ.
ಮಾಜಿ ಕ್ರಿಕೆಟಿಗ ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಏನಿದು ಪ್ರಕರಣ?
ಡಿಸೆಂಬರ್ 27, 1988 ರಂದು ಸಿಧು ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರೊಂದಿಗೆ ಪಾರ್ಕಿಂಗ್ ಸ್ಥಳದ ಬಗ್ಗೆ ಜಗಳವಾಡಿದರು. ಸಿಧು ಮತ್ತು ಅವರ ಸಹವರ್ತಿ ರೂಪಿಂದರ್ ಸಿಂಗ್ ಸಂಧು ಅವರು ಗುರ್ನಾಮ್ ಸಿಂಗ್ ಅವರನ್ನು ಅವರ ಕಾರಿನಿಂದ ಎಳೆದುಕೊಂಡು ಹೊಡೆದಿದ್ದುಗುರ್ನಾಮ್ ಸಾವಿಗೀಡಾಗಿದ್ದರು. 1999 ರಲ್ಲಿ, ಪಟಿಯಾಲದ ಸೆಷನ್ಸ್ ನ್ಯಾಯಾಲಯವು ಸಿಧು ಮತ್ತು ಅವರ ಸಹಚರರನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಖುಲಾಸೆ ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ 2006 ರಲ್ಲಿ ಸಿಧುವನ್ನು ತಪ್ಪಿತಸ್ಥ ನರಹತ್ಯೆಯ ಅಪರಾಧಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
2018 ರಲ್ಲಿ ಸಿಧು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು. ಒಂದೇ ಏಟಿಗೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಯಾವುದೇ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹಿರಿಯ ನಾಗರಿಕರಿಗೆ ನೋವುಂಟು ಮಾಡಿದ ಕಾರಣಕ್ಕೆ ಸಿಧುವನ್ನು ತಪ್ಪಿತಸ್ಥ ಎಂದು ಪರಿಗಣಿಸಿತು. ಸಿಧುಗೆ ಜೈಲು ಶಿಕ್ಷೆ ಮತ್ತು ₹ 1,000 ದಂಡ ವಿಧಿಸಲಾಯಿತು. ಸಿಧು ಅವರ ಸಹಾಯಕ ರೂಪಿಂದರ್ ಸಂಧು ಅವರು ಸ್ಥಳದಲ್ಲಿ ಹಾಜರಿದ್ದಕ್ಕೆ ಸರಿಯಾದ ಪುರಾವೆಗಳಿಲ್ಲ ಎಂದು ಸುಪ್ರೀಂಕೋರ್ಟ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ.