ಕೊಲಂಬೋ: ಶ್ರೀಲಂಕಾದಲ್ಲಿ ರಾಜಕೀಯ- ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ರಾಜಪಕ್ಸ ಕುಟುಂಬದ ಅಧಿಕಾರದ ವಿರುದ್ಧ ಬೌದ್ಧ ಧರ್ಮಗುರುಗಳು ಧ್ವನಿ ಎತ್ತಿದ್ದಾರೆ.
ಲಂಕಾದಲ್ಲಿ ಪ್ರಬಲವಾಗಿರುವ ಬೌದ್ಧ ಧರ್ಮಗುರುಗಳ ಸಮ್ಮೇಳನ ಶನಿವಾರ ನಡೆದಿದ್ದು, ಮಹಿಂದಾ ರಾಜಪಕ್ಸ ರಾಜೀನಾಮೆ ಮೂಲಕ ಹೊಸ ಸರ್ಕಾರಕ್ಕೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ದೇಶದ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಮಹಿಂದಾ ರಾಜಪಕ್ಸ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಇಲ್ಲದೇ ಇದ್ದಲ್ಲಿ ಜನತೆಗೆ ಎಲ್ಲಾ ರಾಜಕಾರಣಿಗಳನ್ನು ತಿರಸ್ಕರಿಸಲು ಕರೆ ನೀಡಬೇಕಾಗುತ್ತದೆ ಎಂದು ಬೌದ್ಧ ಧರ್ಮ ಗುರುಗಳು ಕರೆ ನೀಡಿದ್ದಾರೆ.
ರೆವ್ ಪ್ರೊಫೆಸರ್ ಒಲಗನ್ವಾಟೆ ಚಂದ್ರಸಿರಿ ಬೌದ್ಧ ಧರ್ಮಗುರುಗಳ ಸಮ್ಮೇಳನದ ನಿರ್ಣಯವನ್ನು ಓದಿದ್ದು, ಈ ಸಮ್ಮೇಳನದಲ್ಲಿ 1,000 ಕ್ಕೂ ಹೆಚ್ಚು ಮಂದಿ ಬೌದ್ಧ ಧರ್ಮಗುರುಗಳು ಭಾಗವಹಿಸಿ ಏ.4 ರಂದು ತಾವು ಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಸರಿಗೆ ಬರೆದಿದ್ದ ಪತ್ರದ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಧ್ಯಕ್ಷರ ಹೆಚ್ಚುವರಿ ಅಧಿಕಾರವನ್ನು ತೆಗೆದುಹಾಕಿ, ಪ್ರಧಾನಿ ತಕ್ಷಣವೇ ರಾಜೀನಾಮೆ ನೀಡಿ ಮಧ್ಯಂತರ ಸರ್ಕಾರಕ್ಕೆ ಅವಕಾಶ ಮಾಡಿಕೊಡದೇ ಇದ್ದಲ್ಲಿ, ರ್ಯಾಲಿ ನಡೆಸಿ ಎಲ್ಲಾ ರಾಜಕಾರಣಿಗಳನ್ನೂ ತಿರಸ್ಕರಿಸುವಂತೆ ಜನರಿಗೆ ಕರೆ ನೀಡುತ್ತೇವೆ ಎಂದು ಬೌದ್ಧ ಧರ್ಮಗುರುಗಳು ಎಚ್ಚರಿಸಿದ್ದಾರೆ.
2019 ರಿಂದ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರ ತಪ್ಪುಗಳನ್ನು ಮಾಡುತ್ತಲೇ ಬಂದಿದೆ. ಉನ್ನತ ಹುದ್ದೆಗಳಲ್ಲಿ ಯೋಗ್ಯರಲ್ಲದವರನ್ನು ನೇಮಕ ಮಾಡಿ ದೇಶವನ್ನು ಹಾಳುಗೆಡವಿದರು ಎಂದು ರಾಜಪಕ್ಸ ಕುಟುಂಬದ ವಿರುದ್ಧ ಬೌದ್ಧ ಧರ್ಮಗುರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಯೋಗ್ಯರು ದೇಶವನ್ನು ಆಳಲಿ ಎಂದು ಹೇಳಿದ್ದಾರೆ.