ನವದೆಹಲಿ: ಕೋವಿಡ್ ಲಸಿಕೆ ದಾಖಲೆ ಮತ್ತು ಪ್ರಮಾಣಪತ್ರಗಳನ್ನು ನೀಡುವ ಕಾರ್ಯವನ್ನು ಮುಂದುವರಿಸುವಾಗ ಭಾರತದ ಸಾರ್ವತ್ರಿಕ ಪ್ರತಿರಕ್ಷಣಾ ಕಾರ್ಯಕ್ರಮ ಮತ್ತು ಇತರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗಾಗಿ ಕೋ-ವಿನ್ ಪ್ಲಾಟ್‌ಫಾರ್ಮ್ ಅನ್ನು ಮರುಬಳಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ (UIP) ಅಡಿಯಲ್ಲಿ ಲಸಿಕೆ ದಾಖಲೆಯನ್ನು ಈಗ ನಿರ್ವಹಿಸಲಾಗುತ್ತಿದೆ. ಯುಐಪಿಯನ್ನು ಸೇರಿಸಲು ಕೋ-ವಿನ್ ನ್ನು ಮರುರೂಪಿಸಿದ ನಂತರ, ಸಂಪೂರ್ಣ ಲಸಿಕೆ ವ್ಯವಸ್ಥೆಯು ಡಿಜಿಟಲೀಕರಣಗೊಳ್ಳುತ್ತದೆ, ಇದರಿಂದಾಗಿ ಫಲಾನುಭವಿಗಳ ಪತ್ತೆಹಚ್ಚುವಿಕೆ ಸುಲಭವಾಗುತ್ತದೆ ಎಂದು ಕೋವಿನ್ ಸಹ ಮುಖ್ಯಸ್ಥ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ ಆರ್ ಎಸ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಇದು ಭೌತಿಕ ದಾಖಲೆಯನ್ನು ಇಟ್ಟುಕೊಳ್ಳುವ ತೊಂದರೆಯನ್ನು ದೂರ ಮಾಡುತ್ತದೆ. ರೋಗನಿರೋಧಕ ಕಾರ್ಯಕ್ರಮವನ್ನು ಡಿಜಿಟಲೀಕರಣಗೊಳಿಸಿದ ನಂತರ, ಫಲಾನುಭವಿಗಳು ಸ್ಥಳದಲ್ಲೇ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ. ಅದನ್ನು ಡೌನ್‌ಲೋಡ್ ಕೂಡ ಮಾಡಬಹುದು. ಈ ಪ್ರಮಾಣಪತ್ರಗಳನ್ನು ಡಿಜಿ-ಲಾಕರ್‌ಗಳಲ್ಲಿ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.
ಸಾರ್ವತ್ರಿಕ ಲಸಿಕೆ ಅಭಿಯಾನದಿಂದ ತಡೆಗಟ್ಟಬಹುದಾದ ರೋಗಗಳಿಂದ ಮಕ್ಕಳು ಮತ್ತು ಗರ್ಭಿಣಿ ತಾಯಂದಿರನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಯೋಜನೆಗಳಲ್ಲಿ ಒಂದಾಗಿದೆ. ಇದರ ಅಡಿಯಲ್ಲಿ, ಪೋಲಿಯೊ, ಡಿಫ್ತೀರಿಯಾ, ಟೆಟನಸ್, ದಡಾರ ಮತ್ತು ಹೆಪಟೈಟಿಸ್ ಬಿ ನಂತಹ 12 ಲಸಿಕೆ-ತಡೆಗಟ್ಟಬಹುದಾದ ರೋಗಗಳಿಗೆ ಸರ್ಕಾರವು ಉಚಿತವಾಗಿ ಲಸಿಕೆ ನೀಡುತ್ತದೆ.
ಸಮಗ್ರ ರೋಗನಿರೋಧಕ ಮಾಹಿತಿ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ತಿಳಿಸಿದ ಅಧಿಕಾರಿಯೊಬ್ಬರು, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮಗಳ ಪರಿಣಾಮಕಾರಿ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದರು.
ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸುವಲ್ಲಿ ತೊಡಗಿರುವವರಿಗೆ ಲಭ್ಯವಾಗುವಂತೆ ವೈಯಕ್ತಿಕ ಮಟ್ಟದಲ್ಲಿ ಲಭ್ಯವಿರುವ ದಾಖಲೆಗಳನ್ನು ಜನಸಂಖ್ಯೆಯ ಮಟ್ಟದಲ್ಲಿ ಒಟ್ಟುಗೂಡಿಸಬಹುದು ಎಂದು ಹೇಳಿದರು.