ಟೋಕಿಯೊ: ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ನ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಎಲೆಕ್ಟ್ರಾನಿಕ್ ದೈತ್ಯ ಎನ್‌ಇಸಿ ಕಾರ್ಪೊರೇಷನ್‌ನ ಮುಖ್ಯಸ್ಥ ನೊಬುಹಿರೊ ಆಂಡೋ ಅವರನ್ನು ಭೇಟಿ ಮಾಡಿದ್ದಾರೆ.
ಸಭೆಯ ಕುರಿತು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದ್ದು, ಮೋದಿ ಅವರು ಭಾರತದಲ್ಲಿ ನಡೆಯುತ್ತಿರುವ ಸುಧಾರಣೆಗಳನ್ನು ಉಲ್ಲೇಖಿಸಿದ್ದಾರೆ. ಡಿಜಿಟಲ್ ಶಿಕ್ಷಣ, ಫಿನ್‌ಟೆಕ್, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್‌ಗಳಂತಹ ಕ್ಷೇತ್ರಗಳಲ್ಲಿನ ಅವಕಾಶಗಳ ಕುರಿತು ಅವರು ಮಾತನಾಡಿದರು.
ಭಾರತದ ಟೆಲಿಕಾಂ ವಲಯದಲ್ಲಿ ಎನ್‌ಇಸಿ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ಜೊತೆಗೆ ವಿಶೇಷವಾಗಿ ಎನ್‌ಇಸಿ ಮಾಡಿದ ಚೆನ್ನೈ-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು(ಸಿಎಎನ್‌ಐ) ಮತ್ತು ಕೊಚ್ಚಿ-ಲಕ್ಷದ್ವೀಪ್(ಕೆಎಲ್‌ಐ) ಒಎಫ್‌ಸಿ ಯೋಜನೆಗಳನ್ನು ಗಮನಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್(ಪಿಎಲ್‌ಐ) ಯೋಜನೆಯಡಿ ಹೂಡಿಕೆ ಅವಕಾಶಗಳನ್ನು ಮೋದಿ ಹೈಲೈಟ್ ಮಾಡಿದರು.
'ಕೈಗಾರಿಕಾ ಅಭಿವೃದ್ಧಿ, ತೆರಿಗೆ ಮತ್ತು ಕಾರ್ಮಿಕ ಸೇರಿದಂತೆ ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಕೈಗೊಳ್ಳಲಾಗುತ್ತಿರುವ ವಿವಿಧ ಸುಧಾರಣೆಗಳ ಕುರಿತು ಅವರು ಚರ್ಚಿಸಿದರು ಎಂದು ಹೇಳಿಕೆ ತಿಳಿಸಿದೆ.