ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021 ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು UPSCಯ ಅಧಿಕೃತ ವೆಬ್‌ಸೈಟ್ http://www.upsc.gov.in ನಲ್ಲಿ ನೋಡಬಹುದು.
ಶ್ರುತಿ ಶರ್ಮಾ ದೇಶದಲ್ಲಿ ಮೊದಲ ಸ್ಥಾನದಲ್ಲಿ ಹೊರಹೊಮ್ಮಿದರೆ, ಅಂಕಿತಾ ಅಗರ್ವಾಲ್ ಎರಡನೇ ಸ್ಥಾನ ಪಡೆದರು. ಗಾಮಿನಿ ಸಿಂಗ್ಲಾ ಮೂರನೇ ಟಾಪರ್ ಆಗಿ ಆಯ್ಕೆಯಾಗಿದ್ದಾರೆ. ಈ ವರ್ಷ ಎಲ್ಲಾ ನಾಲ್ಕು ಮೊದಲ ಸ್ಥಾನಗಳು ಮಹಿಳೆಯರ ಪಾಲಾಗಿದೆ. 4ನೇ ಸ್ಥಾನವನ್ನು ಐಶ್ವರ್ಯಾ ವರ್ಮಾ ಅವರು ಪಡೆದುಕೊಂಡಿದ್ದಾರೆ.
2021 ರ ನಾಗರಿಕ ಸೇವೆಗಳ ಪರೀಕ್ಷೆಯ ಲಿಖಿತ ಭಾಗವನ್ನು UPSC 2022ರ ಜನವರಿಯಲ್ಲಿ ನಡೆಸಿತ್ತು. ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳನ್ನು ಏಪ್ರಿಲ್-ಮೇಯಲ್ಲಿ ನಡೆಸಲಾಗಿತ್ತು.
ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳು, ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ನೇಮಕಾತಿಗಾಗಿ ಒಟ್ಟು 685 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ.
ಫಲಿತಾಂಶ ಪ್ರಕಟವಾದ ದಿನಾಂಕದಿಂದ 15 ದಿನಗಳಲ್ಲಿ ಯಶಸ್ವಿ ಅಭ್ಯರ್ಥಿಗಳ ಅಂಕಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ.