ಲಂಡನ್: ಕಾಂಗ್ರೆಸ್ ನಾಯಕ, ಸಂಸದ ತಮ್ಮ ಭಾಷಣದಿಂದಾಗಿ ಹಲವಾರು ಬಾರಿ ಟ್ರೋಲ್ ಆಗುತ್ತಿರುವುದು ಹೊಸ ವಿಷಯವೇನಲ್ಲ. ಇವರು ಎಲ್ಲಿಯೇ ಹೋದರೂ ಅವರು ಮಾಡುವ ಭಾಷಣಗಳಲ್ಲಿ ಎಡವಟ್ಟು ಆಗಿಯೇ ಆಗುತ್ತದೆ ಎಂದು ಕಾಯುತ್ತಿರುವ ಟ್ರೋಲಿಗರಿಗೆ ರಾಹುಲ್ ಗಾಂಧಿಯ ಭಾಷಣ ಆಹಾರ ಒದಗಿಸುತ್ತಿದೆ.
.'ಭಾರತ @75′ ಎಂಬ ಕಾರ್ಯಕ್ರಮವನ್ನು ಲಂಡನ್ನ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕ್ರಿಸ್ಟಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ಹಿಂದೂ ರಾಷ್ಟ್ರೀಯತೆ, ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ಪಾತ್ರದ ಬಗ್ಗೆ ಮಾತನಾಡುವ ವೇಳೆ, ಸಂವಿಧಾನ ಉಲ್ಲೇಖಿಸಿದ್ದರು. ಇದರಲ್ಲಿ ಉಲ್ಲೇಖ ಆಗಿರುವಂತೆ 'ಭಾರತವು ಒಂದು ದೇಶವಲ್ಲ, ಆದರೆ ರಾಜ್ಯಗಳ ಒಕ್ಕೂಟ' ಎಂದರು. ದೇಶ ಮತ್ತು ರಾಷ್ಟ್ರದ ನಡುವಿನ ಅರ್ಥ ತಿಳಿಯದೇ ಈ ರೀತಿ ಮಾತನಾಡಿದ್ದಾರೆ, ಅದರಲ್ಲಿಯೂ ಭಾರತದ ಸಂವಿಧಾನದ 1ನೇ ಪರಿಚ್ಛೇದವನ್ನು ಉಲ್ಲೇಖಿಸಿ ಈ ರೀತಿ ಮಾತನಾಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಇದೀಗ ರಾಷ್ಟ್ರ, ದೇಶ, ಸಂವಿಧಾನ ಇದರ ಬಗ್ಗೆ ಭಾರತೀಯ ನಾಗರಿಕ ಸೇವೆಗಳ ಅಧಿಕಾರಿಯೊಬ್ಬರು ರಾಹುಲ್ಗಾಂಧಿಗೆ ಪಾಠ ಮಾಡಿದ್ದಾರೆ. ಭಾರತೀಯ ರೈಲ್ವೇ ಟ್ರಾಫಿಕ್ ಸೇವೆಗಳ ಅಧಿಕಾರಿ, ಕೇಂಬ್ರಿಡ್ಜ್ ವಿವಿಯಲ್ಲಿ ಕಾಮನ್‌ವೆಲ್ತ್ ಸ್ಕಾಲರ್ ಆಗಿರುವ ಸಿದ್ಧಾರ್ಥ್ ವರ್ಮ, ಇವರು ಸಂವಿಧಾನದ ಬಗ್ಗೆ ರಾಹುಲ್ ಗಾಂಧಿಯವರಿಗೆ ತಿಳಿಹೇಳಿದ್ದಾರೆ.
ಅದೇನೆಂದರೆ, 'ನೀವು ಭಾರತದ ಸಂವಿಧಾನದ 1ನೇ ಪರಿಚ್ಛೇದವನ್ನು ಉಲ್ಲೇಖಿಸಿ, ಭಾರತವು ದೇಶವಲ್ಲ, ರಾಜ್ಯಗಳ ಒಕ್ಕೂಟ ಎಂದಿದ್ದೀರಿ. ಆದರೆ ನೀವು ನೀವು ಸಂವಿಧಾನದ ಹಿಂದಿನ ಪುಟಗಳನ್ನು ತಿರುವಿ ಹಾಕಿದಂತೆ ಕಾಣಿಸುವುದಿಲ್ಲ. ಅದರಲ್ಲಿ ಇರುವ ಪೀಠಿಕೆಯನ್ನು ಒಮ್ಮೆ ನೋಡಿ. ಭಾರತವು ಒಂದು ದೇಶವೆಂದೇ ಸ್ಪಷ್ಟವಾದ ಉಲ್ಲೇಖವಾಗಿದೆ. ಅದರಲ್ಲಿ ರಾಷ್ಟ್ರ ಎಂದು ಉಲ್ಲೇಖವಾಗಿದೆ. ರಾಷ್ಟ್ರ ಎಂದರೆ ದೇಶವೇ ಎಂದು ಹೇಳಿದರು.
ಅದಕ್ಕೆ ರಾಹುಲ್ ಗಾಂಧಿ, ರಾಷ್ಟ್ರ ಎಂಬ ಪದ ಬಳಸಿದ್ದೇಕೆ? ರಾಷ್ಟ್ರ ಅನ್ನೋದು 'ರಾಜನ ಆಡಳಿತ' ಎಂದರು. ಆಗ ಅಧಿಕಾರಿ, ಸಂಸ್ಕೃತದಲ್ಲಿ 'ರಾಷ್ಟ್ರ' ಎಂದರೆ 'ದೇಶ', ರಾಷ್ಟ್ರ ಮತ್ತು ದೇಶ ಎರಡೂ ಒಂದೇ ಎಂದರು. ಆದರೆ ಇದಕ್ಕೆ ಒಪ್ಪದ ಕಾಂಗ್ರೆಸ್ ನಾಯಕ, ರಾಷ್ಟ್ರ ಅನ್ನೋದು 'ಪಶ್ಚಿಮದ ಪರಿಕಲ್ಪನೆ' ಎಂದರು. ತಮ್ಮ ಮಾತಿಗೆ ಇನ್ನೂ ಏನೋ ಸಮಜಾಯಿಷಿ ಕೊಡಲು ಹೋದರು.
ಕೂಡಲೇ ಅಧಿಕಾರಿ ಮಧ್ಯ ಪ್ರವೇಶಿಸಿ, ಭಾರತದ ಬಗೆಗಿನ ನಿಮ್ಮ ಆಲೋಚನೆಗಳು ತಪ್ಪಾಗಿವೆ ಹಾಗೂ ವಿಧ್ವಂಸಕಾರಿಯೂ ಆಗಿದೆ ಎಂದು ನಿಮಗೆ ಅನ್ನಿಸುವುದಿಲ್ಲವೇ? ನಿಮ್ಮ ಆಲೋಚನೆಗಳು ಸಾವಿರಾರು ವರ್ಷಗಳಷ್ಟು ಭವ್ಯ ಇತಿಹಾಸ ಹೊಂದಿರುವ ಭಾರತವನ್ನು ನಿಷ್ಪ್ರಯೋಜಕಗೊಳಿಸಲು ಪ್ರಯತ್ನಿಸುತ್ತವೆ ಎಂದು ಅನ್ನಿಸುತ್ತಿದೆ ಎಂದು ಪ್ರಶ್ನಿಸಿದರು. ಅದಕ್ಕೆ ರಾಹುಲ್ ಗಾಂಧಿ, 'ನನಗೆ ಹಾಗನ್ನಿಸುತ್ತಿಲ್ಲ' ಎಂದು ಹೇಳಿ ಸುಮ್ಮನಾದರು.
ಭಾರತೀಯ ಮಾಧ್ಯಮಗಳನ್ನು ಖರೀದಿಸಲಾಗಿದೆ. ಸರ್ಕಾರವನ್ನು ಬೆಂಬಲಿಸುವ ದೊಡ್ಡ ಕೈಗಾರಿಕೋದ್ಯಮಿಗಳ ಹಿಡಿತದಲ್ಲಿ ಈ ಮಾಧ್ಯಮಗಳಿವೆ. ಹಾಗಾಗಿ, ನಾವು ರಾಜಕೀಯ ಪಕ್ಷವಾಗಿ ಹೋರಾಡುತ್ತಿಲ್ಲ, ಭಾರತವನ್ನು ಆಕ್ರಮಿಸಿಕೊಂಡಿರುವುದರ ಬಗ್ಗೆ ಹೋರಾಡುತ್ತಿದ್ದೇವೆ. ಈ ಹೋರಾಟ ಸುಲಭವಾಗಿಲ್ಲ. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ನಾವು ಮಾಡುತ್ತಿದ್ದೇವೆ' ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿರುವ ಜತೆಗೆ ರಾಷ್ಟ್ರ, ದೇಶದ ಬಗ್ಗೆ ಮಾತನಾಡಿದ್ದರು.