ನವದೆಹಲಿ: 'ಲಸಿಕೆಗೆ ಅನುಮೋದನೆ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಆಯೋಜಿಸಿದ್ದ ಎರಡನೇ 'ಜಾಗತಿಕ ಕೋವಿಡ್-19 ಶೃಂಗಸಭೆ' (ವರ್ಚ್ಯುವಲ್) ಉದ್ದೇಶಿಸಿ ಗುರುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ನಿಯಮಗಳಲ್ಲಿ ಸುಧಾರಣೆಯಾಗಬೇಕಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಿ, ಭಾರತದಲ್ಲಿ ಕೋಟ್ಯಂತರ ಜನರಿಗೆ ನೀಡಿದ್ದ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ತೀರಾ ತಡವಾಗಿ ಮಾನ್ಯತೆ ನೀಡಿತ್ತು.
'ಬೌದ್ಧಿಕ ಆಸ್ತಿ ಹಕ್ಕಿನ ವ್ಯಾಪಾರ ಸಂಬಂಧಿ ವಿಚಾರಗಳೂ ಒಳಗೊಂಡಂತೆ ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ನಿಯಮಗಳನ್ನು ಸಡಿಲಗೊಳಿಸಲು ಪ್ರಧಾನಿ ಇದೇ ವೇಳೆ ಕರೆ ನೀಡಿದರು. ಔಷಧಗಳು ಹಾಗೂ ಲಸಿಕೆಗಳು ಸುಲಭವಾಗಿ ದೊರೆಯುವಂತೆ ಮಾಡಲು ಸರಳೀಕೃತ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸಬೇಕು. ಭವಿಷ್ಯದಲ್ಲಿ ಎದುರಾಗುವ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸಲು ಇದು ಅನಿವಾರ್ಯ ಎಂದು ಅವರು ಪ್ರತಿಪಾದಿಸಿದರು.
ಶ್ರೀಮಂತ ದೇಶಗಳು ಕೋವಿಡ್ ಲಸಿಕೆಯ ಡೋಸ್‌ಗಳನ್ನು ಸಂಗ್ರಹಿಸಿಕೊಂಡವು. ಲಸಿಕೆ ತಂತ್ರಜ್ಞಾನ ಮತ್ತು ಸೂತ್ರಗಳನ್ನು ಹಂಚಿಕೊಳ್ಳಲಿಲ್ಲ. ಇದರಿಂದ ವಿಶ್ವದ ಬಹುತೇಕ ಲಸಿಕೆ ತಯಾರಿಕಾ ಘಟಕಗಳು ಬಳಕೆಯಾಗಲಿಲ್ಲ. ಇಂತಹ ಸಮಸ್ಯೆ ನಿವಾರಣೆಯಾಗಬೇಕು ಎಂದು ಮೋದಿ ಹೇಳಿದರು.
ಭಾರತವು ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದ ಬಗೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಮೋದಿ, ದೇಶದ ಲಸಿಕಾ ಕಾರ್ಯಕ್ರಮ ಜಗತ್ತಿನಲ್ಲಿಯೇ ಅತಿದೊಡ್ಡದು ಎಂದು ಹೇಳಿದರು. ಭಾರತವು ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾಗರಿಕ ಕೇಂದ್ರಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು.
ಹೋರಾಟಕ್ಕೆ ಶಕ್ತಿ ತುಂಬಬೇಕಿದೆ: 'ಕೋವಿಡ್ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ' ಎಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು 'ಅಂತರರಾಷ್ಟ್ರೀಯ ಮಟ್ಟದಲ್ಲಿ ವೈರಾಣು ವಿರುದ್ಧದ ಹೋರಾಟವು ಹುರುಪು ಕಳೆದುಕೊಂಡಿದೆ. ಹೋರಾಟಕ್ಕೆ ಪುನಃ ಶಕ್ತಿ ತುಂಬಬೇಕು' ಎಂದು ಜಾಗತಿಕ ನಾಯಕರಿಗೆ ಮನವಿ ಮಾಡಿದರು.
ಮುನ್ನೆಚ್ಚರಿಕೆ ಡೋಸ್: ವಿದೇಶಕ್ಕೆ ತೆರಳುವವರಿಗೆ ಅವಧಿಗೆ ಮೊದಲೇ ಪಡೆಯಲು ಅವಕಾಶ
ನವದೆಹಲಿ: ಮುನ್ನೆಚ್ಚರಿಕೆ ಡೋಸ್ ಪಡೆಯಲು ಇರುವ ನಿಯಮವನ್ನು ಕೇಂದ್ರ ಸರ್ಕಾರ ಗುರುವಾರ ಸಡಿಲಿಸಿದೆ. ಆ ಪ್ರಕಾರ ಎರಡನೇ ಡೋಸ್ ಲಸಿಕೆ ಪಡೆದು 9 ತಿಂಗಳು ಆಗದೇ ಇದ್ದರೂ ವಿದೇಶಕ್ಕೆ ತೆರಳುವವರು ಮುನ್ನೆಚ್ಚರಿಕೆ ಡೋಸ್ ಪಡೆಯಬಹುದಾಗಿದೆ.
ಕೋವಿನ್ ಜಾಲತಾಣದಲ್ಲಿ ಶೀಘ್ರವೇ ಈ ನೂತನ ಸೇವೆ ಲಭ್ಯವಾಗಲಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ. ಕಳೆದ ವಾರ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ),ವಿದೇಶಕ್ಕೆ ತೆರಳುವ ನಾಗರಿಕರು, ವಿದ್ಯಾರ್ಥಿಗಳಿಗೆ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವೆ ಕಡ್ಡಾಯವಾಗಿ 9 ತಿಂಗಳ ಅಂತರ ಇರಬೇಕು ಎಂಬ ನಿಯಮದಿಂದ ವಿನಾಯಿತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.