ತಿರುನಲ್ವೇಲಿ: ಇದುವರೆಗೂ ಹಸು, ಮೇಕೆ, ಕುರಿಗಳ ಸಾಕಾಣಿಕೆ ಮಾಡಿ, ಇವುಗಳ ಫಾರಂಗಳು ಇರುವುದನ್ನು ಮಾತ್ರ ನೋಡಿದ್ದೇವೆ. ಆದರೆ ಇಲ್ಲೊಬ್ಬ ಕತ್ತೆಗಳನ್ನು ಸಾಕಿರುವುದಷ್ಟೇ ಅಲ್ಲದೇ, ಫಾರಂ ಮಾಡಿ ಭಾರೀ ಆದಾಯ ಗಳಿಸುತ್ತಿದ್ದಾನೆ.
ಅಂದಹಾಗೆ ಇದು ಇರುವುದು ತಮಿಳಿನಾಡಿನ ತಿರುನಲ್ವೇಲಿಯಲ್ಲಿ.
ಬಾಬು ಎಂಬ ಹೆಸರಿನ ಈ ವ್ಯಕ್ತಿ ಶಾಲೆಯನ್ನು ಅರ್ಧದಲ್ಲೇ ಬಿಟ್ಟು, ಕತ್ತೆಗಳನ್ನು ಕಾಯುವ ಕೆಲಸ ಮಾಡುತ್ತಿದ್ದರು. ಮೊದ ಮೊದಲು ಒಂದೆರಡು ಕತ್ತೆಗಳಿದ್ದ ಈತನ ಬಳಿ ಇಂದು ಅವುಗಳಿಗಾಗಿಯೇ ದೊಡ್ಡ ಫಾರಂ ಮಾಡಿದ್ದಾನೆ. ಇವುಗಳ ಹಾಲಿಗೆ ಇಲ್ಲಿ ಭಾರೀ ಬೇಡಿಕೆ ಇದ್ದು, ಒಂದು ಲೀಟರ್ ಹಾಲು 7 ಸಾವಿರಕ್ಕೆ ಮಾರಾಟ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
10ನೇ ತರಗತಿ ಪಾಸಾಗಿ ಮುಂದೆ ಶಾಲೆಗೆ ಹೋಗದೇ ತಮ್ಮದೇ ಸ್ವಂತ ಉದ್ಯೋಗ ಮಾಡಬೇಕೆಂಬ ಹಂಬಲದಿಂದ ಕೈಗೊಂಡ ಇದನ್ನೇ ಉದ್ಯಮವನ್ನಾಗಿ ಬೆಳೆಸಿದ್ದಾರೆ. ಅಂದಹಾಗೆ ಅಷ್ಟು ದುಬಾರಿಯಲ್ಲಿ ಮಾರಾಟವಾಗುವ ಈ ಕತ್ತೆ ಹಾಲನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಇಲ್ಲಿದೆ ಉತ್ತರ.
ಹೌದು… ಕತ್ತೆಗಳ ಹಾಲನ್ನು ಬಹುಪಯೋಗಿಯಾಗಿ ಉಪಯೋಗಿಸಲಾಗುತ್ತಿದೆ. ಯೂನಿಸೆಕ್ಸ್ ಕಾಸ್ಮೆಟಿಕ್ಸ್ ಉತ್ಪನ್ನಗಳು ಕತ್ತೆ ಹಾಲಿನಿಂದಲೇ ತಯಾರಿಸಲಾಗುತ್ತದೆ. ತಿಂಗಳಿಗೆ ಸಾವಿರ ಲೀಟರ್ ಹಾಲು ಇಲ್ಲಿ ಉತ್ಪಾದನೆಯಾಗಲಿದ್ದು, ಅವುಗಳನ್ನು ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಇಲ್ಲಿ ಒಟ್ಟು 2000 ಕತ್ತೆಗಳಿದ್ದು, ಪ್ರತಿ ಕತ್ತೆಗಳಿಂದ ದಿನವೊಂದಕ್ಕೆ 350ಎಂಎಲ್ ಹಾಲು ಸಿಗುತ್ತದೆ ಎಂದು ಮಾಲೀಕ ಬಾಬು ಹೇಳಿಕೊಂಡಿದ್ದಾರೆ.
ಇನ್ನು ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲೂ ಕೂಡ ಕತ್ತೆಗಳ ಫಾರಂ ಇದ್ದು, ಇಲ್ಲೂ ಕತ್ತೆಗಳ ಹಾಲಿಗೆ ಭಾರೀ ಬೇಡಿಕೆ ಇದೆ.
ಒಟ್ಟಾರೆ.. ಬರೀ ಭಾರವಾದ ವಸ್ತುಗಳನ್ನಷ್ಟೇ ಹೊರಲು ಪ್ರಸಿದ್ಧಿಯಾಗಿದ್ದ ಕತ್ತೆಗಳ ಅದೃಷ್ಟ ಬದಲಾಗಿದ್ದು, ಈಗ ಅವುಗಳನ್ನು ಹಸುಗಳಂತೆ ಕಾಣುತ್ತಿರುವುದು ಪ್ರಶಂಸನೀಯ.